ಬೆಂಗಳೂರು: ಮುಸ್ಲಿಮರ ಶೇ 4ರಷ್ಟು ಮೀಸಲಾತಿ ರದ್ದುಪಡಿಸುವ ವಿಚಾರದಲ್ಲಿ ಬಿಜೆಪಿ ದೃಢವಾಗಿದ್ದು ವಿಚಾರಕ್ಕೆ ಸಂಬಂಧಿಸಿ ಚೆಂಡು ಈಗ ಕಾಂಗ್ರೆಸ್ ಅಂಗಳದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಂ ಕೋಟಾ ವಿಚಾರ ಸದ್ಯ ಸುಪ್ರೀಂ ಕೋರ್ಟ್ನಲ್ಲಿದೆ. ಹಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದು,ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಮುಸ್ಲಿಂ ಕೋಟಾವನ್ನು ರದ್ದುಗೊಳಿಸುವ ನಿರ್ಧಾರವನ್ನು ಜಾರಿಗೊಳಿಸುವುದಿಲ್ಲ ಎಂದು ಬಿಜೆಪಿ ಸರಕಾರ ಸ್ಪಷ್ಟಪಡಿಸಿತ್ತು. ನಮ್ಮ ನಿಲುವು ಇಂದಿಗೂ ಅದಕ್ಕೆ ಬದ್ಧವಾಗಿಯೇ ಇದೆ ಎಂದರು.
ಪ್ರತಿಪಕ್ಷ ಕಾಂಗ್ರೆಸ್ ನಮ್ಮ ನಿರ್ಧಾರ ವಿರೋಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಕೋಟಾವನ್ನು ಮುಂದುವರಿಸುತ್ತದೆಯೇ ಎಂಬುದು ಪ್ರಶ್ನೆ, ನಾವು ಮುಸ್ಲಿಂ ಕೋಟಾವನ್ನು ರದ್ದುಗೊಳಿಸುತ್ತೇವೆ ಅಥವಾ ಅದನ್ನು ಮುಂದುವರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ಗೆ ಯಾವತ್ತೂ ಹೇಳಿರಲಿಲ್ಲ. ನಮ್ಮ ನಿರ್ಧಾರವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರ ಆಪ್ತ ರವಿವರ್ಮ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯನವರ ಆಗ್ರಹದ ಮೇರೆಗೆ ಅವರು ಹಾಗೆ ಮಾಡಿದ್ದು, ನ್ಯಾಯಾಲಯ ಇನ್ನಷ್ಟೇ ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದೆ. ನಮ್ಮ ವಾದವನ್ನು ನಾವು ನ್ಯಾಯಾಲಯದಲ್ಲಿ ಮಂಡಿಸುತ್ತೇವೆ ಎಂದು ಮಾಜಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬೊಮ್ಮಾಯಿ ಸೂಚಿಸಿದರು