ಉತ್ತರ ಕನ್ನಡ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಣೆ ತಡೆಯಲು ಅಬಕಾರಿ ಇಲಾಖೆ ಹರಸಾಹಸ ಪಡುತ್ತಿದ್ದು, ಇಲಾಖೆಯ ಕಣ್ತಪ್ಪಿಸಿ ಗೋವಾ ರಾಜ್ಯದಲ್ಲಿ ತಯಾರಾಗುವ ಮದ್ಯವನ್ನು ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಣೆ ನಡೆಸಲಾಗುತ್ತಿದ್ದು, ಪ್ರಕರಣಗಳನ್ನು ಪತ್ತೆ ಹಚ್ಚಲು ಅಬಕಾರಿ ಇಲಾಖೆ ಡ್ರೋನ್ ಬಳಕೆಗೆ ಮುಂದಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶ ಹೆಚ್ಚು ಇದ್ದು, ಮದ್ಯ ಪ್ರಿಯರ ಸ್ವರ್ಗ ಎಂದೇ ಖ್ಯಾತಿಯ ಗೋವಾ ರಾಜ್ಯವು ಪಕ್ಕದಲ್ಲಿಯೇ ಇರುವುದರಿಂದ ಇಲಾಖೆಯನ್ನು ವಂಚಿಸಿ ಅಕ್ರಮ ಮದ್ಯ ಸಾಗಣೆ ನಡೆಯುತ್ತಿದ್ದು, ಕಾಡಿನ ಮಧ್ಯೆ ಹುದುಗಿಸಿಟ್ಟ ನೂರಾರು ಲೀಟರ್ ಗೋವಾ ಮದ್ಯವನ್ನು ಪತ್ತೆ ಮಾಡಿದ ಪ್ರಕರಣಗಳು ಹಾಗೂ ಕೆಲವೆಡೆ ಇಲಾಖೆಯ ವಾಹನ, ಸಿಬ್ಬಂದಿಯೂ ತಲುಪಲಾಗದ ಪ್ರದೇಶದಲ್ಲಿ ಈ ಅಕ್ರಮ ದಂಧೆಗಳು ನಡೆಸುತ್ತಿರುವುದು ಪತ್ತೆಯಾಗಿದೆ.
ಇಲ್ಲಿನ ಮಾಜಾಳಿಯ ಅರಣ್ಯ ಪ್ರದೇಶದಿಂದ ಗೋವಾ ರಾಜ್ಯದ ಗಡಿದಾಟುವ ಅನೇಕ ಮಾರ್ಗಗಳನ್ನು ದಂಧೆಕೋರರು ಕಂಡುಕೊಂಡಿದ್ದಾರೆ. ದಾಳಿಯ ಸುಳಿವು ಸಿಕ್ಕಾಗ ಆರೋಪಿಗಳು ಕಾಡಿನಲ್ಲಿ ಅಡಗುತ್ತಾರೆ ಅಥವಾ ಮತ್ತೊಂದು ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸತ್ತಾರೆ. ಹೀಗಾಗಿ ಸದ್ಯ ಖಾಸಗಿ ಮಾಲೀಕತ್ವದ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಈ ಪ್ರಯತ್ನ ಯಶಸ್ವಿಯಾದರೆ ಡ್ರೋನ್‌ಗಳಿಗಾಗಿ ಇಲಾಖೆಗೆ ಪ್ರಸ್ತಾವನೆ ಕಳಿಸಲಾಗುತ್ತದೆ ಎಂದು ಅಬಕಾರಿ ಇಲಾಖೆಯ ಡಿಎಸ್‌ಪಿ ಬಸವರಾಜ ಕರವಿನಕೊಪ್ಪ ಅವರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.