ಸಿಂಧನೂರು: ಮಾರುಕಟ್ಟೆಯಲ್ಲಿ ಜೋಳದ ದರ ಕುಸಿತದಿಂದ ಕಂಗಾಲಾಗಿರುವ ರೈತರು, ಸರಕಾರದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ನಂಬಿ ನಿರಾಸೆಗೊಳಗಾಗಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಮಾರಾಟಕ್ಕೆ ನೋಂದಣಿ ಆರಂಭಿಸಿ ತಿಂಗಳು ಕಳೆದರೂ ಪ್ರಯೋಜನವಾಗಿಲ್ಲ. ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಈ ಸಮಸ್ಯೆ ಪರಿಹರಿಸಿ, ಜೋಳ ಖರೀದಿಗೆ ಅವಕಾಶ ನೀಡುವ ಭರವಸೆ ನೀಡಲಾಗಿದೆ. ಆದರೆ ಸರಕಾರ ಕಣ್ಣು ತೆರೆದಿಲ್ಲ.ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಜೋಳಕ್ಕೆ 2500 ರಿಂದ 2600 ರೂ.ದರವಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸರಕಾರದ ಕನಿಷ್ಠ ಬೆಂಬಲ ಬೆಲೆ ಕೇಂದ್ರಲ್ಲಿ ಹೈಬ್ರಿಡ್ ಬಿಳಿ ಜೋಳಕ್ಕೆ 3180 ರೂ., ಮಾಲ್ದಂಡಿ ಬಿಳಿ ಜೋಳಕ್ಕೆ 3225 ರೂ. ಇದ್ದು, ಮಾರುಕಟ್ಟೆ ದರಕ್ಕೂ ಸರಕಾರದ ದರಕ್ಕೂ 600 ರೂ. ವ್ಯತ್ಯಾಸವಿರುವುದರಿಂದ ರೈತರು ಸರಕಾರದ ಖರೀದಿ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಹಿಂಗಾರು-ಮುಂಗಾರು ತಾಂತ್ರಿಕ ಸಮಸ್ಯೆ ಹಾಗೂ ಸಣ್ಣಪುಟ್ಟ ಸಮಸ್ಯೆ ದೂರಾಗಿಸಿ, ಖರೀದಿ ಕೇಂದ್ರ ಆರಂಭಿಸಿಲ್ಲ.
ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ನೀತಿ ಸಂಹಿತೆ ಜಾರಿಯಾದರೆ, ಸಮಸ್ಯೆ ಆಗಲಿದೆ? ಎಂಬ ಪ್ರಶ್ನೆ ರೈತರದ್ದಾಗಿದ್ದು, ತಾಲೂಕಿನ ರಾಮತ್ನಾಳ, ರಾಗಲಪರ್ವಿ, ಗೋನವಾರ, ಹೆಡಗಿನಾಳ, ಅಲಬನೂರು, ಬಾದರ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಜೋಳ ಬೆಳೆದ ಬೆಳೆಗಾರರು, ಜೋಳವನ್ನು ಮಾರಾಟ ಮಾಡದೆ, ಮನೆ ಎದುರು ಶೇಖರಿಸಿಟ್ಟು, ತಾಡಪಲ್ಲುಗಳಲ್ಲಿ ಮುಚ್ಚಿಡಲಾಗಿದೆ.
ಶೇಖರಿಸಿಟ್ಟಿರುವ ಜೋಳಕ್ಕೆ ನುಸಿ ಹತ್ತುತ್ತಿವೆ. ಸರಕಾರದ ಖರೀದಿ ಕೇಂದ್ರಕ್ಕೆ ಜೋಳ ನೀಡಿದರೆ, ಒಂದಷ್ಟು ಹಣ ಉಳಿಯಲಿದೆ ಎಂಬ ಲೆಕ್ಕಾಚಾರ ರೈತರದ್ದಾಗಿದೆ.ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಲೋಪ ಮತ್ತು ಖರೀದಿ ಕೇಂದ್ರ ಆರಂಭಕ್ಕೆ ಕಾಳಜಿ ವಹಿಸದ ಪರಿಣಾಮ ಸಮಸ್ಯೆ ಉಂಟಾಗಿದೆ. ಜೋಳ ಖರೀದಿಯಾಗದೇ ಉಳಿದಿದೆ.
ಸರಕಾರದ ನಿರ್ಲಕ್ಷ್ಯ ನೀತಿಗೆ ಬೇಸತ್ತ ರೈತರು ಕಡಿಮೆ ದರಕ್ಕೆ ವರ್ತಕರಿಗೆ ಜೋಳ ಮಾರಾಟ ಮಾಡಿದರೆ, ಖರೀದಿ ಕೇಂದ್ರ ಆರಂಭವಾದರೆ ವರ್ತಕರು ಖರೀದಿ ಕೇಂದ್ರ ಲಾಭ ಪಡೆಯುವ ಸಾಧ್ಯತೆ ಇದೆ. ಸರಕಾರ ಕೂಡಲೇ ಖರೀದಿ ಕೇಂದ್ರ ಆರಂಭಕ್ಕೆ ಮುಂದಾಗಿ, ರೈತರ ನೆರವಿಗೆ ಧಾವಿಸಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.