ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಸಮಸ್ಯೆಗಳನ್ನು ಚರ್ಚಿಸಬೇಕು ಇಲ್ಲವೇ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ದೆಹಲಿಗೆ ತೆರಳಲು ಅವಕಾಶ ನೀಡಬೇಕು ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಒತ್ತಾಯಿಸಿದರು.
ಇದು ಪ್ರಧಾನಿಯ ಜವಾಬ್ದಾರಿ ಎಂದು ಹೇಳುತ್ತಿದ್ದೇವೆ. ಅವರನ್ನು ದೇಶದ ಪ್ರಧಾನಿ ಮಾಡಲು ನಾವೂ ಮತ ಹಾಕಿದ್ದು, ಈ ದೇಶ ಎಲ್ಲರಿಗೂ ಸೇರಿದ್ದು, ಪ್ರಧಾನಿ ಎಲ್ಲರಿಗೂ ಸೇರಿದ್ದು, ಅವರು ಮುಂದೆ ಬಂದು ಪರಿಸ್ಥಿತಿಯನ್ನು ನಿಭಾಯಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬುಧವಾರ ಬೆಳಗ್ಗೆ ಶಂಭು ಗಡಿಯಲ್ಲಿ ಇತರ ರೈತ ಮುಖಂಡರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಸಭೆಗಳಲ್ಲಿ ಭಾಗವಹಿಸಿದ್ದು, ಪ್ರತಿ ಅಂಶ ಚರ್ಚಿಸಲಾಗಿದ್ದು, ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಧಾನ ಮಂತ್ರಿ ಮುಂದೆ ಬಂದು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. 1.5-2 ಲಕ್ಷ ಕೋಟಿ ರೂ. ತುಂಬಾ ದೊಡ್ಡ ಮೊತ್ತವಲ್ಲ. ಸುಮಾರು 60 ರಷ್ಟು ರೈತರು ಇದರ ಮೇಲೆ ಅವಲಂಬಿತರಾಗಿದ್ದಾರೆ, ಕೃಷಿ ಕಾರ್ಮಿಕರನ್ನು ಸೇರಿಸಿದರೆ, ಇದು ದೇಶದ ಜನಸಂಖ್ಯೆಯ 80 ಪ್ರತಿಶತದಷ್ಟಿದೆ ಎಂದು ಅವರು ಹೇಳಿದರು.