ಬಾಗಲಕೋಟೆ
ಜಿಲ್ಲೆಯ ಅಮೀನಗಡದಲ್ಲಿ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಆಗಸ್ಟ್ 23ರ ಎರಡು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
2021 ರ ಡಿಸೆಂಬರ್ ತಿಂಗಳಾಂತ್ಯಕ್ಕೆ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯದೆ ಅತಂತ್ರರಾಗಿದ್ದ ಸದಸ್ಯರು ಆಗಸ್ಟ್ 23 ರಂದು ಚುನಾವಣೆ ನಡೆದು ಅಧಿಕಾರ ನಡೆಸುವ ಭಾಗ್ಯ ಪಡೆಯಲಿದ್ದಾರೆ.
2021 ರಲ್ಲಿ ನಡೆದ ಚುನಾವಣೆಯಲ್ಲಿ 16 ಸದಸ್ಯ ಬಲದಲ್ಲಿ ಬಿಜೆಪಿ 7, ಕಾಂಗ್ರೆಸ್ 4 ಹಾಗೂ ಪಕ್ಷೇತರರು 5 ಸ್ಥಾನ ಪಡೆದುಕೊಂಡಿದ್ದರು. ಇದೀಗ ಸರಕಾರ ಘೋಷಿಸಿದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಗೆ ಮೀಸಲಾಗಿದೆ.
ಅಧ್ಯಕ್ಷ ಸ್ಥಾನದ ಎಸ್.ಸಿ ವರ್ಗದಡಿ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರಿದ್ದು ಅವರಲ್ಲೇ ಪೈಪೋಟಿ ನಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಪೈಪೋಟಿ ನಡೆಸುವ ಸಾಧ್ಯತೆಯಿದೆ.
*ವರಿಷ್ಠರ ಸೂತ್ರವೇನು?*
ಮೂವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಿದ್ದು ಯಾರಿಗೆ ಮಣೆ ಹಾಕಬೇಕು ಎಂಬ ಚಿಂತೆಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ. ಸದ್ಯ ಮೂವರು ಆಕಾಂಕ್ಷಿಗಳ ಮಧ್ಯೆ ರಾಜಿ ಸೂತ್ರ ನಡೆಯುತ್ತಿದೆ ಎಂಬ ಮಾತು ಕೇಳಿದ್ದು ಎರಡೂವರೆ ವರ್ಷದಲ್ಲಿ ಅಧಿಕಾರ ಹಂಚಿಕೆಯ ಮಾತು ಕೇಳಿ ಬಂದಿದೆ.
ಬಿಜೆಪಿ ನಿಲುವೇನು?
ಒಬ್ಬ ಪಕ್ಷೇತರರೊಂದಿಗೆ 8 ಸದಸ್ಯರನ್ನು ಹೊಂದಿದ ಬಿಜೆಪಿ ಮೀಸಲಾತಿ ಆಟದಿಂದಾಗಿ ಅಧಿಕಾರದಿಂದ ದೂರ ಉಳಿಯುವಂತಾಗಿದೆ. ಆದರೂ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ನಡೆದರೆ ಆಗ ತಮ್ಮ ನಿಲುವೇನು ಎಂಬ ಬಿಸಿಬಿಸಿ ಚರ್ಚೆಯೂ ಬಿಜೆಪಿ ಮೊಗಸಾಲೆಯಲ್ಲಿ ನಡೆದಿದೆ.
ಉಸ್ತುವಾರಿ ಸಭೆ ನಡೆಸುವರೇ?
ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿಯಿಂದ ಉಸ್ತುವಾರಿ ಗಳನ್ನು ನೇಮಿಸಿದ್ದು ಶಾಸಕ ಮಹೇಶ ಟೆಂಗಿನಕಾಯಿ ಅವರನ್ನು ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್ ನಲ್ಲಿ ಒಡಕುಂಟಾದರೆ ಅದರ ಲಾಭ ಪಡೆದು ಉಪಾಧ್ಯಕ್ಷ ಸ್ಥಾನವನ್ನಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೋ ಅಥವಾ ನಮ್ಮ ಪಕ್ಷದ ಸರಕಾರವಿಲ್ಲ, ಕಾಂಗ್ರೆಸ್ ನವರೇ ಏನಾದರೂ ಮಾಡಿಕೊಳ್ಳಲಿ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವುದೋ ಎಂಬುದಕ್ಕೆ ಆಗಸ್ಟ್ 23 ರಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.