ಬೆಂಗಳೂರು: ವಿಶೇಷ ಚೇತನ’ ಮಕ್ಕಳಿಗೆ ನೀಡುವ ಸೌಕರ್ಯದಲ್ಲೂ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು 2.18 ಕೋಟಿ ರೂ. ಅಕ್ರಮ ಎಸಗಿದ್ದು, ಇದರಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿ 56 ಜನ ಹಾಗೂ 22 ಎನ್‌ಜಿಒಗಳ ವಿರುದ್ಧ ಶಿಕ್ಷಣ ಇಲಾಖೆಯು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.
ಕಂಪ್ಯೂಟರ್ ಶಿಕ್ಷಣ ನೀಡದೇ ಸರಕಾರಕ್ಕೆ 109 ಕೋಟಿ ರೂ. ವ್ಯರ್ಥ ಮಾಡಿದ್ದ ಇಲಾಖೆ ಅಧಿಕಾರಿಗಳು, ಈ ಪ್ರಕರಣದಲ್ಲಿ ಕೋಟಿ ರೂ. ಅಕ್ರಮ ಮಾಡಿದ್ದು, ಇಡೀ ಪ್ರಕರಣದಲ್ಲಿ ಹಲವಾರು ಶಿಕ್ಷಣಾಧಿಕಾರಿಗಳ ಕೈವಾಡವಿರುವುದನ್ನು ಶಿಕ್ಷಣ ಇಲಾಖೆ ಪತ್ತೆ ಹಚ್ಚಿದೆ. ಆರೋಪ ಎದುರಿಸುತ್ತಿರುವ ಅಧಿಕಾರಿಗಳಲ್ಲಿ ಹಿರಿಯ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕರು ನಿವೃತ್ತಿ ಹೊಂದಿದ್ದಾರೆ ಎಂದು ತಿಳಿದಿದೆ.
ವಿಶೇಷ ಚೇತನ ಮಕ್ಕಳಿಗೆ ಸರಕಾರದಿಂದ ಸಿಗುತ್ತಿರುವ ಸೌಲಭ್ಯಗಳೇ ಕಮ್ಮಿ. ಸಿಕ್ಕ ಸೌಲಭ್ಯಗಳನ್ನು ಸಮರ್ಪಕವಾಗಿ, ನ್ಯಾಯಯುತವಾಗಿ ಹಂಚಿಕೆ ಮಾಡಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ‘ಕಿಕ್ ಬ್ಯಾಕ್’ ಆಸೆಗಾಗಿ ವಿಶೇಷ ಚೇತನ ಮಕ್ಕಳ ಅನುದಾನಲ್ಲೂ ದುಡ್ಡು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.ಕೇಂದ್ರ ಸರಕಾರ ‘ದ್ವಿತೀಯ ಹಂತದ ವಿಶೇಷ ಚೇತನ ಮಕ್ಕಳಿಗೆ ಸಮಗ್ರ ಶಿಕ್ಷಣ'(ಐಇಡಿಎಸ್‌ಎಸ್) ಯೋಜನೆಯನ್ನು 2009-10ರಿಂದ 2012-13ರವರೆಗೆ 4 ವರ್ಷಗಳಲ್ಲಿ ಅನುಷ್ಠಾನ ಮಾಡಿದೆ.
ಗುರುತಿಸಲಾದ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ)ಗೆ 5 ವಿಶೇಷಚೇತನ ವಿದ್ಯಾರ್ಥಿಗಳಿಗೆ ಒಬ್ಬರಂತೆ ವಿಶೇಷ ಶಿಕ್ಷಣ ತರಬೇತಿ ಹೊಂದಿದ ಶಿಕ್ಷಕರ ನೇಮಕ, ಅಲ್ಲದೆ, ಪ್ರತಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಲಕರಣೆ ಒದಗಿಸುವುದು, ಪುಸ್ತಕ ಮತ್ತು ಸ್ಟೇಷನರಿ, ಸಮವಸ್ತ್ರ, ಸಾರಿಗೆ ಭತ್ಯೆ, ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಯೋಜನೆ ಇದಾಗಿದೆ ಎಂದು ಮಾಹಿತಿ ಕಂಡು ಬಂದಿದೆ.