ಬೆಂಗಳೂರು: ಈ ವರ್ಷದ ಹವಾಮಾನ ವೈಪರೀತ್ಯದಿಂದ ಜನ ತತ್ತರಿಸಿ ಹೋಗಿದ್ದಾರೆ. ಒಂದೆಡೆ ಬಿರು ಬಿಸಿಲು, ಮತ್ತೊಂದಡೆ ನೀರಿನ ಕೊರತೆ. ಈ ಬಾರಿಯ ಬೇಸಿಗೆ ಎದುರಿಸುವುದು ಜನರಿಗೆ ಕಷ್ಟವಾಗಿದೆ. ಇನ್ನು ರೈತರ ಸ್ಥಿತಿ ಹೇಳ ತೀರದಂತಾಗಿದೆ.
ಇತರ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದರೆ, ಬೇಸಿಗೆಗಾಲದ ಹಣ್ಣುಗಳ ಬೆಳೆಗಾರರು ಈ ಬಾರಿಯ ಫಸಲಿನ ಮೇಲೆ ನಿರೀಕ್ಷೆ ಬಿಡುವಂತಾಗಿದೆ. ಮಾವು ಹಾಗೂ ಹಲಸು ಬೆಳೆಗಾರರಿಗೆ ಬೇಸಿಗೆ ಸುಗ್ಗಿ ಕಾಲವಾಗಿರುತ್ತದೆ. ಆದರೆ ಈ ವರ್ಷ ಮಾವು ಬೆಳೆಗಾರರು ತೀವ್ರ ಆತಂಕ್ಕೀಡಾಗಿದ್ದಾರೆ.
ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಮಾತ್ರವೇ ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯ ಮಾವು ಬೆಳೆಗಾರರು ಹವಾಮಾನ ವೈಪರೀತ್ಯದಿಂದ ಆತಂಕಗೊಂಡಿದ್ದಾರೆ.
ಸಾಮಾನ್ಯವಾಗಿ ಈ ಸಮಯ ಅಂದರೆ ಫೆಬ್ರವರಿ ಕಳೆದು ಮಾರ್ಚ್ ಆರಂಭವಾಗುತ್ತಿದಂತೆ ಮಾವಿನ ಮರಗಳು ಹೂವು ಬಿಟ್ಟು, ಪೀಚು(ಎಲೆಯ ಕಾಯಿ) ಬೆಳಯಬೇಕಿತ್ತು. ಕೆಲವು ಭಾಗಗಳಲ್ಲಿ ಈ ಸಮಯದಲ್ಲಿ ಮಾವಿನ ಕಾಯಿ ಬೆಳೆಯಬೇಕಾಗಿತ್ತು. ಆದರೆ ಈ ವರ್ಷ ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಹೂ ಬಿಟ್ಟಿಲ್ಲ.
ಇನ್ನೂ ಕೆಲವು ಭಾಗಗಳಲ್ಲಿ ಈಗಾಗಲೇ ಬಂದಿರುವ ಹೂವುಗಳು ಬಿಸಿಲಿನ ಝಳಕ್ಕೆ ಒಣಗಿ ಉದುರಲಾರಂಭಿಸಿದೆ. ಈ ಬಾರಿ ಉತ್ತಮ ಮಾವು ಫಸಲಿನ ನಿರೀಕ್ಷೆ ಇದೆ. ಆದರೆ ಫಸಲು ಆರಂಭಕ್ಕೂ ಮೊದಲೇ ಈ ಬಾರಿ ಬೆಳೆ ಕೈಕೊಡುವ ಸೂಚನೆ ಸಿಗುತ್ತಿದ್ದು, ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಎಚ್ಚೆತ್ತುಕೊಂಡಿದ್ದು, ಅಧಿಕಾರಿಗಳು ಬೆಳೆ ಉಳಿಸಿಕೊಳ್ಳಲು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಮರದಿಂದ ಹೂವುಗಳು ಉದುರದಂತೆ ತಡೆಯಲು ಔಷಧಿಗಳನ್ನು ಸಿಂಪಡಿಸಿ ಮರಗಳ ಕಾಳಜಿ ವಹಿಸುವಂತೆ ತೋಟಗಾರಿಕೆ ಇಲಾಖೆ ಬೆಳೆಗಾರರಿಗೆ ಸೂಚಿಸಿದೆ. 2023-24ನೇ ಸಾಲಿನ ಮಾವು ಹಂಗಾಮಿನಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಸಸ್ಯ ಸಂರಕ್ಷಣೆ, ಹೂ ಮತ್ತು ಕಾಯಿ ಉಳಿಸಿಕೊಳ್ಳುವುದು, ರೋಗ ಬಾಧೆಯ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.