ಹುಬ್ಬಳ್ಳಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆ ದಾರಿತಪ್ಪಿದ್ದು, ರಾಜ್ಯ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದಿದ್ದರೆ, ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೂಚಿಸಿದರು,
ಹುಬ್ಬಳ್ಳಿಯ ನಿರಂಜನ ಹಿರೇಮಠ ಅವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ, ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಇಡೀ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಈ ಷಡ್ಯಂತ್ರದ ಹಿಂದೆ ಬಹಳಷ್ಟು ಜನ ಇದ್ದಾರೆ ಎಂದು ನೇಹಾ ತಂದೆ ತಾಯಿ ಹೇಳುತ್ತಿದ್ದಾರೆ ಎಂದರು.
ನಿರಂಜನ್ ಹಿರೇಮಠ ಅವರ ಕುಟುಂಬಕ್ಕೂ ನಮಗೂ ಬಹಳ ಹಳೆಯ ಸಂಬಂಧವಿದೆ. ಕಮಡೊಳ್ಳಿಯಲ್ಲಿ ನಿರಂಜನ ಹಿರಿಯರು ನಮ್ಮ ಕುಟುಂಬದ ಗುರುಗಳು. ನೇಹಾ ಹತ್ಯೆ ಬಹಳ ಆಘಾತದ ಸಂಗತಿ. ಅಮಾಯಕ ಹೆಣ್ಣು ಮಗುವನ್ನು ಕ್ರೂರವಾಗಿ ಕೊಲೆ ಮಾಡಿರುವುದು ಎಲ್ಲರೂ ತಲೆತಗ್ಗಿಸುವಂತಹ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು
ಸಮಗ್ರ ತನಿಖೆಯಾಗಬೇಕಾದರೆ ಸಿಬಿಐಗೆ ಕೊಡಬೇಕು ಎನ್ನುವುದು ಕುಟುಂಬಸ್ಥರ ಆಗ್ರಹ. ಆದರೆ, ರಾಜ್ಯ ಸರ್ಕಾರ ಸಿಐಡಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸ ಮಾಡಿದೆ. ಈ ಪ್ರಕರಣದಲ್ಲಿ ಏನನ್ನೂ ಮುಚ್ಚಿಡಬಾರದು, ಯಾರನ್ನೂ ರಕ್ಷಿಸಬಾರದು ಅನ್ನುವ ಮನೋಭಾವ ರಾಜ್ಯ ಸರ್ಕಾರಕ್ಕೆ ಇದ್ದರೆ ಪ್ರಕರಣವನ್ನು ಕೂಡಲೇ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.
.