This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಜಿ.ಪಂ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಅಂಗನವಾಡಿ ಸಿಬ್ಬಂದಿ ನೇಮಕಾತಿಯಲ್ಲಿ ಲೋಪವಾಗದಂತೆ ಕ್ರಮವಹಿಸಲು ಸಚಿವ ಸಿ.ಸಿ.ಪಾಟೀಲ ಸೂಚನೆ

ನಿಮ್ಮ ಸುದ್ದಿ ಬಾಗಲಕೋಟೆ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಮಂಗಳವಾರ ಜರುಗಿದ ಜಿ.ಪಂ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಿಯಾದ ಮಾಹಿತಿ ಇಲ್ಲದೇ ಅರ್ಹ ಅಭ್ಯರ್ಥಿಗಳು ಅಂಗನವಾಡಿ ಸಿಬ್ಬಂದಿ ನೇಮಕಾತಿ ಆಯ್ಕೆಯಲ್ಲಿ ವಿಫಲರಾಗುತ್ತಿದ್ದಾರೆ. ಆ ವ್ಯಾಪ್ತಿಯಲ್ಲಿ ವಿಧವೆಯರು ಇದ್ದರೂ ಬೇರೆಯವರು ಆಯ್ಕೆಯಾಗುತ್ತಿರುವ ಬಗ್ಗೆ ಶಾಸಕ ಸಿದ್ದು ಸವದಿ ಆರೋಪಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ನೇಮಕಾತಿಯಲ್ಲಿ ಲೋಪವಾಗದಂತೆ ಕ್ರಮವಹಿಸಲು ತಿಳಿಸಿದರು.


ಜಿಲ್ಲೆಯಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ನೀಡುವ ಆಹಾರಧಾನ್ಯ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಎಂ.ಎಸ್.ಪಿ.ಟಿ.ಸಿ ಮೂಲಕ ಸರಬರಾಜು ಆಗುತ್ತಿದ್ದು, ಅವರ ಮೇಲೆ ಕ್ರಮವಹಿಸುವಂತೆ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಸಭೆಗೆ ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನಹರಿಸಿ ಪರಿಶೀಲನೆ ನಡೆಸುವ ಮೂಲಕ ಕ್ರಮವಹಿಸಬೇಕು. ಇಲ್ಲವಾದಲ್ಲಿ ಎಂ.ಎಸ್.ಪಿ.ಟಿ.ಸಿ ಬದಲಾಗಿ ಜಿಲ್ಲೆಯಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಅವರಿಗೆ ಬದಲಾಯಿಸಲು ಸಚಿವರು ತಿಳಿಸಿದರು.


ಕೃಷಿ ಇಲಾಖೆಯ ಪ್ರಗತಿ ಪರಿಶೀಲಿಸಿದಾಗ ರೈತ ವಿದ್ಯಾನಿಧಿ ಯೋಜನೆಯಡಿ ಈ ಮೊದಲು ಕೇವಲ ಜಮೀನನ್ನು ಹೊಂದಿದ ರೈತರ ಮಕ್ಕಳಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಕೃಷಿ ಕೂಲಿ ಕಾರ್ಮಿಕರು ಹಾಗೂ ನೇಕಾರರ ಮಕ್ಕಳಿಗೂ ಸಹ ಈ ಯೋಜನೆ ಅನ್ವಯವಾಗಲಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲ ನೇಕಾರರ ಮಕ್ಕಳಿಗೆ ಈ ಯೋಜನೆ ಲಾಭ ಪಡೆಯುವಂತೆ ಮಾಡಬೇಕು. ರಾಜ್ಯದ 31 ಜಿಲ್ಲೆಗಳಲ್ಲಿ ನೇಕಾರರಿಲ್ಲ. ಈ ಭಾಗದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅರ್ಹ ನೇಕಾರರ ಮಕ್ಕಳು ಪ್ರಯೋಜನ ಪಡೆಯುವಂತೆ ಮಾಡಲು ತಿಳಿಸಿದರು.


ಸರಕಾರ ಘೋಷಣೆ ಮಾಡಿದ ಪರಿಹಾರಧನವನ್ನು ಜಿಲ್ಲೆಯ ಅರ್ಹ ರೈತರಿಗೆ ತಲುಪಿಸುವ ಕಾರ್ಯವಾಗಬೇಕು. ಪರಿಹಾರ ವಿತರಣೆಯಲ್ಲಿ ಸಮಸ್ಯೆ ಇದ್ದಲ್ಲಿ ಪರಿಹಾರ ಕಂಡುಕೊಂಡು ಸರಿಪಡಿಸುವ ಕೆಲಸವಾಗಬೇಕು. ಫಸಲ್ ಭಿಮಾ ಯೋಜನೆಯಡಿ ಪ್ರಗತಿ ವಿವರ ಪಡೆದುಕೊಂಡರು. 2021-22ರ ಮುಂಗಾರು ಹಂಗಾಮಿಗೆ 15,460 ರೈತರ ಪೈಕಿ 5,688 ರೈತರಿಗೆ 1612.28 ಲಕ್ಷ ರೂ., ಹಿಂಗಾರು ಹಂಗಾಮಿಗೆ 8,952 ರೈತರು ಹಾಗೂ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಇದುವರೆಗೆ 6,489 ರೈತರು ವಿಮೆಗೆ ಒಳಪಡಿಸಿದ್ದಾರೆಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.


ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿರುವ ಶಾಲಾ-ಕಾಲೇಜು, ವಸತಿ ನಿಲಯಗಳ ಆವರಣದಲ್ಲಿ ಸಸಿಗಳನ್ನು ನೆಡಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವಿವಿಧ ವಸತಿ ನಿಲಯಗಳ ಮಾಹಿತಿ ಪಡೆದುಕೊಂಡು ಸಸಿಗಳನ್ನು ನೆಡಲು ಕ್ರಮವಹಿಸಲು ಸೂಚಿಸಿದರು. ಸಸಿಗಳನ್ನು ನೆಟ್ಟ ಬಗ್ಗೆ ಪರಿಶೀಲನೆ ಕೈಗೊಳ್ಳುವಂತೆ ಜಿ.ಪಂ ಸಿಇಓ ಅವರಿಗೆ ತಿಳಿಸಿದರು. ಅಲ್ಲದೇ ಈಗಾಗಲೇ ವಿವಿದೆಡೆ ನೆಟ್ಟ ಸಸಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪಶು ಇಲಾಖೆಯ ಪ್ರಗತಿ ಪರಿಶೀಲನೆಯಲ್ಲಿ ಜಿಲ್ಲೆಗೆ ಮಂಜೂರಾದ ಸರಕಾರಿ ಗೋಶಾಲೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಪುಣ್ಯಕೋಟಿ ದತ್ತು ಯೋಜನೆಯಡಿ ಜಿಲ್ಲೆಯಲ್ಲಿರುವ ಖಾಸಗಿ ಗೋಶಾಲೆಗಳಿಗೆ ಅಳವಡಿಸು ಸೂಚಿಸಿದರು. ಅಲ್ಲದೇ ಜಿಲ್ಲೆಗೆ ಮಂಜೂರಾದ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಸಚಿವರು ಸೂಚಿಸಿದಾಗ ಹೊಸದಾಗಿ ಬಂದ ಸಂಚಾರಿ ವಾಹನಗಳಿಗೆ ವಾಹನ ಚಾಲಕರ ಕೊರತೆ ಇದ್ದುದನ್ನು ತಿಳಿಸಿದು ಮೇಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಕೆಲವೇ ದಿನಗಳಲ್ಲಿ ವಾಹನ ಚಾಲನೆ ನೇಮಕ ಮಾಡಿಕೊಳ್ಳಲಿದ್ದಾರೆಂದು ಸಭೆಗೆ ಸಚಿವರು ತಿಳಿಸಿದರು.

ಇದೇ ರೀತಿ ಶಿಕ್ಷಣ ಇಲಾಖೆ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರೇಷ್ಮೆ, ಪಂಚಾಯತ ರಾಜ್, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಪ್ರಕಾಶ ಹುಕ್ಕೇರಿ, ಹನಮಂತ ನಿರಾಣಿ, ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಯುಕೆಪಿಯ ಜನರಲ್ ಮ್ಯಾನೇಜರ್ ರಾಹುಕ್ ರತನ್ ಪಾಂಡೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್
*ಅನುಕಂಪದ ನೇಮಕಾತಿ ಆದೇಶ ಪತ್ರ ವಿತರಣೆ*
———————————
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಇತರೆ ಕಾರಣಗಳಿಗಾಗಿ ಮೃತರಾದ ನೌಕರರ ಅವಲಂಭಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾರಿ ಆದೇಶ ಹಾಗೂ ಕೋವಿಡ್ ಪರಿಹಾರ ಧನದ ಮಂಜೂರಾತಿ ಆದೇಶ ಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವಿತರಿಸಿದರು.

 

*ಸ್ವ-ಸಹಾಯ ಸಂಘಗಳಿಗೆ ಚೆಕ್ ವಿತರಣೆ*
—————————-
ದೀನ್ ದಯಾಳ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ದಮನಿತ ಮಹಿಳೆಯರು ಮತ್ತು ವಿಶೇಷ ಚೇತನರ ಮಹಿಳಾ ಸ್ವ-ಸಹಾಯಕ ಸಂಘಗಳಿಗೆ ಸಮುಧಾಯ ಬಂಡವಾಳ ನಿಧಿ ಚೆಕ್‍ನ್ನು ಬಾದಾಮಿ ತಾಲೂಕಿನ ನೆಲವಗಿ ಗ್ರಾಮದ ಮಹಿಳೆಯರ ಶ್ರೀ ಗುರು ಪುಟ್ಟರಾಜ ಅಂಗವಿಕಲರ ಸ್ವ-ಸಹಾಯ ಸಂಘಕೆ 1.50 ಲಕ್ಷ ರೂ, ಮುಧೋಳ ತಾಲೂಕಿನ ಹೆಬ್ಬಾಳ ಮತ್ತು ನಾಗನಾಪೂರ ಗ್ರಾಮದ ದಮನಿತ ಮಹಿಳೆಯರ ಲಕ್ಷ್ಮೀ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲಾ 2 ಲಕ್ಷ ರೂ.ಗಳ ಚೆಕ್‍ನ್ನು ವಿತರಿಸಲಾಯಿತು.

Nimma Suddi
";