This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsPolitics NewsState News

Gift Politics : ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್‌ ಪಾಲಿಟಿಕ್ಸ್‌; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು

Gift Politics : ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್‌ ಪಾಲಿಟಿಕ್ಸ್‌; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ವರುಣ ಕ್ಷೇತ್ರದಲ್ಲಿ (Varuna Assembly Constituency) ಕುಕ್ಕರ್‌ ಹಂಚಿಕೆ (Cooker Distribution) ಆಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈ ಬಗ್ಗೆ ಇರುವ ಆರೋಪಕ್ಕೆ ಇದು ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ. ಅಲ್ಲದೆ, ಪ್ರತಿಪಕ್ಷ ಬಿಜೆಪಿ ಈ ಸಂಬಂಧ ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿದೆ.

ಇನ್ನು ಗ್ಯಾರಂಟಿ ಕೂಪನ್ ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವನ್ನು (Congress Government) ವಜಾ ಮಾಡುವಂತೆ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲೀಗ ಗಿಫ್ಟ್‌ ಪಾಲಿಟಿಕ್ಸ್‌ (Gift Politics) ಸಾಕಷ್ಟು ಸದ್ದು ಮಾಡುತ್ತಿದೆ.

“ವಿಧಾನಸಭಾ ಚುನಾವಣೆ ವೇಳೆ ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಲು ಸಾವಿರಾರು ಜನರನ್ನು ಸೇರಿಸಿದ್ದಲ್ಲದೆ, ಅವರೆಲ್ಲರಿಗೂ ಕುಕ್ಕರ್‌ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ನೀಡಲಾಗಿತ್ತು. ಆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ಅವರು ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಅವುಗಳನ್ನು ಕೊಡಿಸಿದ್ದರು” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ದೂರು ಕೊಡಲು ಬಿಜೆಪಿ ನಿರ್ಧಾರ

ಚುನಾವಣೆಯಲ್ಲಿ ಕುಕ್ಕರ್ ಹಂಚಿಕೆ ಮಾಡಿ ಗೆಲುವು ಸಾಧಿಸಿದ್ದೇವೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿದೆ. ಇದನ್ನೇ ರಾಜಕೀಯ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಸಿದ್ದರಾಮಯ್ಯ ಶಾಸಕ ಸ್ಥಾನವನ್ನು ಅನರ್ಹ ಮಾಡುವಂತೆ ಕೋರಿ ಬಿಜೆಪಿ ದೂರು ಕೊಡಲು ಮುಂದಾಗಿದೆ.

ಕ್ರಮ ಕೈಗೊಳ್ಳಲು ಬೊಮ್ಮಾಯಿ ಒತ್ತಾಯ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಕುಕ್ಕರ್‌ ಹಾಗೂ ಇಸ್ತ್ರಿ ಪೆಟ್ಟಿಗೆಯನ್ನು ಹಂಚಿಕೆ ಮಾಡಿದ್ದರಿಂದಲೇ ತನ್ನ ತಂದೆ ಗೆಲ್ಲಲು ಕಾರಣವಾಯಿತು ಎಂದು ಯತೀಂದ್ರ ಹೇಳಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ವಿರುದ್ಧ ತಕರಾರು ಅರ್ಜಿ ಇದೆ. ಯತೀಂದ್ರ ಹೇಳಿದ್ದಕ್ಕೆ ಸಾಕ್ಷ್ಯಾಧಾರ ಇದ್ದರೆ ಆಯೋಗ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಕ್ರಿಯೆ ನೀಡದ ಪ್ರತಿಸ್ಪರ್ಧಿ ಸೋಮಣ್ಣ
ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ವರುಣಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ. ಸೋಮಣ್ಣ ಆಗಮಿಸಿದ್ದರು. ಬಳಿಕ ಕೆಲ ಕಾಲ ಬೊಮ್ಮಾಯಿ ಜತೆ ಚರ್ಚೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆ.ಎಸ್.‌ ಈಶ್ವರಪ್ಪ ಆಕ್ರೋಶ
ಮತಕ್ಕಾಗಿ ಕುಕ್ಕರ್, ಇಸ್ತ್ರಿ ಪೆಟ್ಟಿಗೆ ಹಂಚಿಕೆ ಮಾಡಿದ್ದೇವೆ ಎಂಬ ಯತೀಂದ್ರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ, ಸಿಎಂ ಕ್ಷೇತ್ರದಲ್ಲಿ ಲಂಚ ಕೊಟ್ಟು, ಆಮಿಷ ತೋರಿಸಿ ಗೆದ್ದಿದ್ದಾರೆ. ಚುನಾವಣಾ ಆಯೋಗ ತಕ್ಷಣ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು: ಎಚ್.ಡಿ. ಕುಮಾರಸ್ವಾಮಿ
ಜನರಿಗೆ ಆಸೆ, ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಬೇಕು. ಕೇಂದ್ರ ಚುನಾವಣಾ ಆಯೋಗ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಒತ್ತಾಯ ಮಾಡಿದ್ದಾರೆ.

ಈ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಗ್ಯಾರಂಟಿ ಕೂಪನ್‌ಗಳ ಮೇಲೆ ಸಹಿ ಮಾಡಿ ಮನೆಮನೆಗೂ ಹಂಚಿಕೆ ಮಾಡಿದ್ದಾರೆ. ಈ ಕೂಪನ್‌ಗಳ ಬಗ್ಗೆ ಆಯೋಗ ತನಿಖೆ ನಡೆಸಿ, ರಾಜ್ಯದ ಆ ಪಕ್ಷದ 135 ಶಾಸಕರ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ನಡೆದಿದ್ದೇ ಕುಕ್ಕರ್, ಮಿಕ್ಸಿ, ತವಾಗಳ ಮೇಲೆ. ಅವುಗಳಿಂದಲೇ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗೆದ್ದಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದಕ್ಕೆಲ್ಲ ರಾಜ್ಯದ ಜನತೆಗೆ ಮರುಳಾಗಬೇಡಿ ಅಂದಿದ್ದೆ. ನಮ್ಮ ಚನ್ನಪಟ್ಟಣದಲ್ಲಿ ನಮ್ಮ ಜನ ಇಂಥ ಆಮಿಷಗಳಿಗೆ ಮರುಳು ಆಗಲಿಲ್ಲ. ಆದರೆ, ರಾಮನಗರದಲ್ಲಿ ಅದೆಲ್ಲ ನಡೆಯಿತು. ಅಲ್ಲಿ ಗಿಫ್ಟ್ ಕೂಪನ್‌ಗಳನ್ನು ಹಂಚಿಕೆ ಮಾಡಲಾಯಿತು. ಚುನಾವಣಾ ಆಯೋಗ ಸರಿಯಾಗಿ ತನಿಖೆ ಮಾಡಿದರೆ, ಸತ್ಯ ಹೊರಬರುತ್ತದೆ. ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.‌

ಅಕ್ರಮ ಸರ್ಕಾರ
ಈವರೆಗೂ ರಾಜ್ಯದಲ್ಲಿ ಇಂಥ ಅಕ್ರಮ ಸರ್ಕಾರ ಬಂದಿಲ್ಲ. ಪ್ರಜಾಪ್ರಭುತ್ವದ ದಾರಿಯಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಚುನಾವಣಾ ಆಯೋಗ ಸರಿಯಾದ ರೀತಿ ತೀರ್ಮಾನ ಮಾಡಿದರೆ ಈ ಸರ್ಕಾರವನ್ನು ವಜಾ ಮಾಡಬೇಕು ಎಂದ ಅವರು, ಕೇಂದ್ರ ಸರ್ಕಾರವೂ ಗಿಫ್ಟ್ ಕೂಪನ್ ಹಂಚಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.

ಮುಂದಿನ ಲೋಕಸಭೆಗೆ ಸ್ಪರ್ಧೆ ಇಲ್ಲ
ಯಾವುದೇ ಕಾರಣಕ್ಕೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ನಾನು ವಿಧಾನಸಭೆಯಲ್ಲಿ ಚನ್ನಪಟ್ಟಣದಿಂದ ಗೆದ್ದಿದ್ದೇನೆ. ಚನ್ನಪಟ್ಟಣದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ನಾನು ಲೋಕಸಭೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಅಂತಹ ಆಲೋಚನೆಯೂ ಇಲ್ಲ ಎಂದು ಅವರು ತಿಳಿಸಿದರು.

ಮೈತ್ರಿ ಚರ್ಚೆಗಾಗಿ ನಾಳೆ ದೆಹಲಿಗೆ
ಬಿಜೆಪಿ ಜತೆ ಮೈತ್ರಿ ಕುರಿತ ಚರ್ಚೆಗೆ ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ಆ ಪಕ್ಷದ ಹೈಕಮಾಂಡ್‌ನ ಕೆಲ ಉನ್ನತ ನಾಯಕರನ್ನು ಭೇಟಿ ಮಾಡುತ್ತೇನೆ. ಭೇಟಿ ಬಳಿಕ ಏನು ಚರ್ಚೆ ಆಗುತ್ತದೋ ನೋಡೋಣ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

";