ಬಾಗಲಕೋಟೆ
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆ ಹಾಗೂ ಯುವ ಮತದಾರರ ಹೆಸರನ್ನು ಮತಾರರ ಪಟ್ಟಿಯಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಹಾಗೂ ಬಾಗಲಕೋಟೆ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಇ ಓ ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹೆಚ್ಚಿನ ಮಹಿಳೆಯರು, ಯುವಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಕುರಿತು ಅರಿವು ಇಲ್ಲದೇ ಇರುವದರಿಂದ ಚುನಾವಣಾ ಪ್ರಕ್ರೀಯೆಯಲ್ಲಿ ಭಾಗವಹಿಸದೇ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಮಹಿಳೆ ಮತ್ತು ಯುವ ಸಮೂಹದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಕುರಿತು ಜಾಗೃತಿ ಮೂಡಿಸಿ, ಬರುವ ಲೋಕಸಭಾ ಚುನಾವಣೆಯಲ್ಲಿ ಶೇಕಡವಾರು ಮತದಾನ ಹೆಚ್ಚಳವಾಗುವ ಕಾರ್ಯವಾಗಬೇಕು ಎಂದರು.
ಸಾರ್ವಜನಿಕ ಸ್ಥಳ, ಕೊಳಗೇರಿ ಪ್ರದೇಶಗಳು, ಸಭೆ ಸಮಾರಂಭ, ಕಾಲೇಜು ಆವರಣಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿರುವ ಕುರಿತು ಪ್ರಚಾರ ಮತ್ತು ಜಾಗೃತಿ ಮೂಡಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯ ಅಭಿಯಾನವನ್ನು ಯಶಸ್ವೀಗೊಳಿಸಬೇಕು ಎಂದು ಹೇಳಿದರು.
ಸ್ಥಳಿಯ ಶಿಕ್ಷಕರನ್ನು ಬಿ ಎಲ್ ಒ ಗಳಾಗಿ ನೇಮಿಸುವ ಕೆಲಸವಾಗಬೇಕು. ಬೂತ ಮಟ್ಟದಲ್ಲಿ ಮತದಾರರ ಹೆಸರು ನೋಂದಣಿಯಾದಲ್ಲಿ ಹೆಚ್ಚಿನ ಮಟ್ಟದ ಸಹಕಾರಿಯಾಗುವದರೊಂದಿಗೆ ಅಭಿüಯಾನ ಯಶಸ್ವೀ ಕೂಡ ಆಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣೆ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ವಯಂ ಪ್ರೇರಿತರಾಗಿ ಯಾವ ಅಧಿಕಾರಿಯೂ ಮತದಾರರ ಹೆಸರನ್ನು ತೆಗೆದು ಹಾಕುವಂತಿಲ್ಲ, ರಾಜಕೀಯ ಪಕ್ಷಗಳಿಂದ ಅಪಸ್ವರ ಕೇಳಿ ಬರದಂತೆ ಒಟ್ಟಾರೆಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಸುಗಮವಾಗಿ ಮುಕ್ತಾಯಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ ಎಮ್ ಅವರು ಮಾತನಾಡಿ ಚುನಾವಣೆ ಪ್ರಕ್ರೀಯೆಯಲ್ಲಿ ಎಲ್ಲರನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಯಶಸ್ವೀಗೊಳಿಸಿರಿ ಎಂದರು.
ಸಭೆಯಲ್ಲಿ ಮತದಾನ ಜಾಗೃತಿಯ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್, ಉಪ ವಿಭಾಗಾಧಿಕಾರಿಗಳಾದ ಸಂತೋಷ ಕಾಮಗೌಡ, ಶ್ವೇತಾ ಬೀಡಿಕರ್ ಹಾಗೂ ಆಯಾ ತಾಲೂಕಿನ ತಹಶೀಲ್ದಾರರು ಮತ್ತು ಇ ಓ ಇದ್ದರು.