ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತರು ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಬರಗಾಲದ ಕಾರಣಕ್ಕೆ ರೈತರಿಗೆ ತುಸು ರಿಲೀಫ್ ನೀಡಲು ಕೈಗೊಂಡಿರುವ ಈ ನಿರ್ಧಾರವು ಪ್ರಾಥಮಿಕ ಸಹಕಾರ ಸಂಘ, ಮತ್ತು ಭೂ ಅಭಿವೃದ್ಧಿ ಬ್ಯಾಂಕ್‌ಗಳು (ಪಿಕಾರ್ಡ್) ಮತ್ತು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿನ ಸುಸ್ತಿ ಸಾಲಗಳಿಗೆ ಅನ್ವಯವಾಗಲಿದೆ.ಸಾಲಗಳ ಅಸಲು ಪಾವತಿಸಿದರೆ ಅದರ ಮೇಲಿನ ಬಡ್ಡಿ ಮನ್ನಾ ಆಗಲಿದೆ.
ರೈತರು ಬಡ್ಡಿ ಮನ್ನಾ ಸೌಲಭ್ಯ ಪಡೆಯಬೇಕಾದರೆ ಇದೇ ತಿಂಗಳ 29 ರೊಳಗೆ ಸಾಲಗಳ ಅಸಲು ಮರುಪಾವತಿಸಬೇಕಿದೆ. 2023ರ ಡಿಸೆಂಬರ್ 31ಕ್ಕೆ ಸುಸ್ತಿಯಾಗಿರುವ ರೈತರ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಅನ್ವಯವಾಗುವಂತೆ ಕಳೆದ ಜ.20 ರಂದು ಸರಕಾರ ಆದೇಶ ಹೊರಡಿಸಿದೆ.ಈ ಕ್ರಮಕ್ಕೆ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿತು.
ಈ ತೀರ್ಮಾನದಿಂದ ಕೃಷಿ ಸಾಲಗಳ ಮೇಲಿನ ಒಟ್ಟು 440.20 ಕೋಟಿ ರೂ. ಸುಸ್ತಿ ಬಡ್ಡಿ ಮನ್ನಾ ಆಗಲಿದೆ.ನಬಾರ್ಡ್ ನೆರವಿನೊಂದಿಗೆ 6 ಜಿಲ್ಲೆಗಳಲ್ಲಿ ತಲಾ ಒಂದೊಂದು ಬಹುಉತ್ಪನ್ನ ಶೀತಲಗೃಹಗಳನ್ನು ಒಟ್ಟು 65.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು ಎಂದು ಮಾಹಿತಿ ಕಂಡು ಬಂದಿದೆ.