ಅಮೀನಗಡ ಪೊಲೀಸರ ಕಾರ್ಯಾಚರಣೆ
ಬಾಗಲಕೋಟೆ
ಬೊಲೆರೋ ಗೂಡ್ಸ್ ವಾಹನವೊಂದು ಕಳ್ಳತನವಾದ ಒಂದೇ ದಿನದಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪೊಲೀಸರು ಪತ್ತೆ ಹಚ್ಚಿದ ಘಟನೆ ನಡೆದಿದೆ.
ಠಾಣೆ ವ್ಯಾಪ್ತಿಯ ಕಮತಗಿ ಕ್ರಾಸ್‌ನಲ್ಲಿ ನಿಂತಿದ್ದ ಬೊಲೆರೋ ಗೂಡ್ಸ್ ವಾಹನವನ್ನು ಅಪರಿಚಿತರೊಬ್ಬರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಬೆಂಗಳೂರು ಮೂಲದ ಚಾಲಕ ತಮ್ಮ ವಾಹನ ಕಳ್ಳತನದ ಬಗ್ಗೆ ಮಾ.15 ರಂದು ದೂರು ನೀಡಿದ್ದರು.
ಕಳ್ಳತನ ಕುರಿತು ಪತ್ತೆಗಾಗಿ ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ, ಸಿಪಿಐ ಮಾರ್ಗದರ್ಶನದಲ್ಲಿ ಅಮೀನಗಡ ಪಿಎಸೈ ಜ್ಯೋತಿ ವಾಲೀಕಾರ, ವೈ.ಎಚ್.ಪಠಾಣ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಕಳ್ಳತನ ಕೃತ್ಯ ಎಸಗಿದ ಆರೋಪಿಯನ್ನು ಗುಡೂರ (ಎಸ್‌ಸಿ) ಗ್ರಾಮದಲ್ಲಿ ಪತ್ತೆ ಹಚ್ಚಿದ ತಂಡ ಬೊಲೆರೋ ವಾಹನ, ಬೈಕ್, ಸೋಲಾರ್ ಮೋಟಾರ್ ಹಾಗೂ ಪಂಪ್‌ಸೆಟ್ ಸೇರಿ ಒಟ್ಟು 5 ಲಕ್ಷ 85 ಸಾವಿರ ರೂ. ಮೊತ್ತದ ಮಾಲು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತನಿಖಾ ತಂಡದಲ್ಲಿ ಸಿಬ್ಬಂದಿ ವಿ.ವೈ.ಪಾಟೀಲ, ಆನಂದ ಮನ್ನಿಕಟ್ಟಿ, ಸುರೇಶ ಆಲೂರ, ವೈ.ಎಸ್.ಬೋಳಿ, ಮನೋಹರ ಪತ್ತಾರ, ರಮೇಶ ಗಣಿ, ಸೋಮು ವಿಟ್ಲಾಪೂರ ಇದ್ದರು. ಪ್ರಕರಣ ಬೇಸುವ ತನಿಖಾ ತಂಡದ ಅಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಎಸ್‌ಪಿ ಶ್ಲಾಘನೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.