ಬಾಗಲಕೋಟೆ
ಸಿಹಿ ಬಾಕ್ಸ ಎಂದು ನೀಡಲಾಗುವ ಉಡುಗೊರೆಗಳನ್ನು ಸಹ ಸರಕಾರಿ ನೌಕರ ನಿರಾಕರಿಸಿದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಹೇಳಿದರು.
ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಭ್ರಷ್ಟಾಚಾರ ವಿರುದ್ದ ಜಾಗೃತಿ ಮೂಡಿಸಲು ಸರಕಾರಿ ನೌಕರರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ಬಾರಿ ಉಡುಗೊರೆಯನ್ನು ಸ್ವೀಕರಿಸಲು ಪ್ರಾರಂಭಿಸಿದಲ್ಲಿ ಅದು ಮುಂದೆ ಪೆಂಡಂಭೂತವಾಗಿ ಬೆಳೆಯುತ್ತದೆ. ಕೇವಲ ಹಣ ಪಡೆಯುವುದು ಅಷ್ಟೇ ಭ್ರಷ್ಟಾಚಾರವಲ್ಲ, ಯಾವುದೇ ವಸ್ತುವನ್ನು ಪಡೆದರೂ ಕೂಡಾ ಅದು ಭ್ರಷ್ಟಾಚಾರವೇ ಆಗುತ್ತದೆ. ಜಾಗೃತಿ ಕಾರ್ಯಕ್ರಮದ ಮುಖ್ಯ ಉದ್ದೇಶವೆ ಲಂಚ ಪಡೆಯುವದನ್ನು ಕಡಿಮೆಗೊಳಿಸುವುದಾಗಿದೆ ಎಂದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಪ್ರಾಸ್ತಾವಿಕ ಮಾತನಾಡಿ ಪ್ರಾಮಾಣಿಕವಾಗಿರುವ ವ್ಯಕ್ತಿಗಳು ಸಹ ಸರಕಾರಿ ನೌಕರಿ ಸಿಕ್ಕ ನಂತರ ಬದಲಾಗುವ ಮನಸ್ಥಿತಿಗೆ ಬದಲಾಗುವುದು ಬೇಡ. ಇಂದು ಎಲ್ಲ ಕ್ಷೇತ್ರದಲ್ಲಿಯು ಕೂಡಾ ಲಂಚಂ ಸರ್ವಂ ಎನ್ನುವಂತಾಗಿದೆ. ಇದು ಒಮ್ಮೆ ಪ್ರಾರಂಭವಾದಲ್ಲಿ ಮುಂದೆ ನಿಲ್ಲಿಸುವುದು ಕಷ್ಟವಾಗುತ್ತದೆ. ಇದನ್ನು ತಳ ಹಂತದಲ್ಲಿಯೇ ತಡೆಗಟ್ಟಬೇಕಾಗಿದೆ. ಆತ್ಮ ಸಾಕ್ಷಿಯಾಗಿ ಕೆಲಸ ಮಾಡಿ ನಮ್ಮ ಜೀವನ ಶೈಲಿಯನ್ನು ಸರಳವಾಗಿ ಇಟ್ಟುಕೊಂಡಲ್ಲಿ ನಾವು ಲಂಚದ ಆಮಿಷಕ್ಕೆ ಒಳಗಾಗುವುದು ತಪ್ಪುತ್ತದೆ ಎಂದರು.
ಕಲಬುರಗಿ ಜಿಲ್ಲಾ ಲೋಕಾಯುಕ್ತ ಎಸ್‍ಪಿ ಎ.ಆರ್.ಕರ್ನೂಲ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಾರ್ವಜನಿಕ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಅಧಿಕಾರಿಗಳು ಅನೇಕಬಾರಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಇರುತ್ತದೆ. ಇದು ಕೂಡಾ ಒಂದು ಭ್ರಷ್ಟಾಚಾರದ ರೂಪವಾಗಿದ್ದು, ಅಧಿಕಾರಿ ವರ್ಗದವರು ತಮ್ಮ ಸಂಬಳಕ್ಕೆ ತಕ್ಕಂತೆ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಅಧಿಕಾರಿ ಮತ್ತು ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿವುದರೊಂದಿಗೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಕಡತಗಳನ್ನು ಕ್ರಮಬದ್ದವಾಗಿ ನಿರ್ವಹಿಸುವುದು ಕೂಡಾ ಮುಖ್ಯವಾಗಿರುತ್ತದೆ. ಕಡತಗಳನ್ನು ಸರಿಯಾಗಿ ಇಟ್ಟುಕೊಳ್ಳೂವುದರಿಂದ ಭ್ರಷ್ಟಾಚಾರವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಮುಗ್ದ ಜನರನ್ನು ಬಳಸಿಕೊಂಡು ನಮ್ಮ ಆಸೆ ಆಕಾಂಕ್ಷೆಗಳನ್ನು ತಿರಿಸಿಕೊಳ್ಳಬಾರದು. ಗ್ರುಪ ಡಿ ಯಿಂದ ಹಿಡಿದು ಗ್ರುಪ ಎ ವೆರೆಗಿನ ಲಂಚಾವತಾರಕ್ಕೆ ಒಳಗಾಗಿದ್ದನ್ನು ಕಂಡಿದ್ದೇವೆ. ಪ್ರತಿ ದಿನ ಕೆಲಸದಲ್ಲಿ ಆಗುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಈ ಪ್ರಯತ್ನ ಎಲ್ಲರಲ್ಲಿಯೂ ಆಗಬೇಕು. ಅಂದಾಗ ಮಾತ್ರ ಭ್ರಷ್ಟಾಚಾರ ನಿಮೂಲನೆ ಮಾಡಲು ಸಾದ್ಯವಾಗುತ್ತದೆ. ಭ್ರಷ್ಟಾಚಾರ ಶೂನ್ಯ ಮಟ್ಟಕ್ಕೆ ಇಳಿಯುವ ವರೆಗೆ ಜಾಗೃತಿ ಕಾರ್ಯಕ್ರಮಗಳು ನಿರಂತರ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಬಾಗಲಕೋಟ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ವಕೀಲರ ಸಂಘದ ಕಾರ್ಯದರ್ಶಿ ಶ್ರೀಶೈಲ ಹಾವರಗಿ ಸೇರಿದಂತೆ ಇತರರು ಇದ್ದರು.