ಬೆಳಗಾವಿ:
ರಾಜ್ಯದಲ್ಲಿ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು (Government Job) ಖಾಲಿ ಇರುವ ಬಗ್ಗೆ ಬೆಳಗಾವಿ ಚಳಿಗಾಳದ ಅಧಿವೇಶನದಲ್ಲಿ (Belagavi Winter Session) ಚರ್ಚೆಗೆ ಬಂದಿದ್ದು, ಆಡಳಿತ ಮತ್ತು ವಿಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದೆ. ಪರಿಷತ್ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಸರ್ಕಾರಿ ಇಲಾಖೆಯಲ್ಲಿ (Government Department) 7 ಲಕ್ಷ ಜನ ಮಾಡಬೇಕಾದ ಕೆಲಸವನ್ನು ಈಗ 4 ಲಕ್ಷ ಜನರು ಮಾಡುತ್ತಲಿದ್ದಾರೆ. ಸರ್ಕಾರ ಹುದ್ದೆಗಳ ಬಗ್ಗೆ ಕೊಟ್ಟ ಉತ್ತರ ಅಸಮರ್ಪಕವಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದಿದ್ದು, ಗದ್ದಲಕ್ಕೆ ಕಾರಣವಾಗಿದೆ.
ಖಾಲಿ ಹುದ್ದೆ ಬಗ್ಗೆ ಸರ್ಕಾರ ಕೊಟ್ಟ ಉತ್ತರ ಅಸಮರ್ಪಕವಾಗಿದೆ ಎಂದು ತೇಜಸ್ವಿನಿ ರಮೇಶ್ ಹೇಳಿಕೆ ನೀಡುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಸಲೀಂ ಅಹಮದ್, ಸರ್ಕಾರ ಈಗಾಗಲೇ ಉತ್ತರ ಕೊಟ್ಟಿದೆ ಎಂದು ಹೇಳಿದರು. ಆಗ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ಈ ಹಿಂದೆ ನಿಮ್ಮ ಸರ್ಕಾರದ ಇತ್ತಲ್ಲವೇ? ಆಗ ಏನು ಕತ್ತೆ ಕಾಯ್ತಾ ಇದ್ರಾ? ಕೇಂದ್ರ ಸರ್ಕಾರದಲ್ಲಿ ಒಂದು ಕೋಟಿ ಹುದ್ದೆ ಖಾಲಿ ಇದೆ ಎಂದು ಹೇಳಿದರು. ಇದು ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು.
ಸಿಎಂ ಕಲಾಪಕ್ಕೆ ಬಂದು ಉತ್ತರಿಸಲಿ
ಈ ಹೇಳಿಕೆಯಿಂದ ಆಕ್ರೋಶಗೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು, ಕತ್ತೆ ಅನ್ನೋ ಪದವನ್ನು ಕಡಿತದಿಂದ ತೆಗೆಯಲು ಒತ್ತಾಯ ಮಾಡಿದರು. ಬಳಿಕ ಮಾತನಾಡಿದ ತೇಜಸ್ವಿನಿ ರಮೇಶ್, ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ನಮಗೆ ಆರೋಪಿಸುತ್ತಾರೆ. ಆದರೆ, ನಾವು ಬ್ಲಾಕ್‌ಮೇಲ್ ಮಾಡುತ್ತಿಲ್ಲ. ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಯಾವ ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಅಂತ ಮುಖ್ಯಮಂತ್ರಿಗಳು ಕಲಾಪಕ್ಕೆ ಆಗಮಿಸಿ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸಿಎಂ ಉತ್ತರಕ್ಕಾಗಿ ಪಟ್ಟು
ಆಗ ಮಾತನಾಡಿದ ಯು.ಬಿ. ವೆಂಕಟೇಶ್, ಈಗಾಗಲೇ ಮುಖ್ಯಮಂತ್ರಿಗಳಿಂದಲೇ ಉತ್ತರ ಕೊಡಿಸಿಯಾಗಿದೆ. ಇವರು ಕಳೆದ ಐದು ವರ್ಷದಿಂದ ಏನ್ ಕತ್ತೆ ಕಾಯುತ್ತಿದ್ದರಾ? ಯಾಕೆ ಏಳನೇ ವೇತನ ಆಯೋಗ ಜಾರಿ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದರು. ಇದರಿಂದ ಅಸಮಾಧಾನಗೊಂಡ ತೇಜಸ್ವಿನಿ ರಮೇಶ್, ಕತ್ತೆ ಕಾಯುವ ಕೆಲಸ ಸದನದಲ್ಲಿ ಮಾಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಬಂದು ಉತ್ತರ ಕೊಡಬೇಕು. ಅಲ್ಲಿಯವರೆಗೂ ಧರಣಿ ವಾಪಸ್ ಪಡೆಯಲ್ಲ ಎಂದು ಪಟ್ಟುಹಿಡಿದು ಕುಳಿತರು.
ಕತ್ತೆಯ ಗುಣವನ್ನು ಬೆಳೆಸಿಕೊಳ್ಳಬೇಕು
ಆಗ ಬೋಜೇಗೌಡ ಮಾತನಾಡಿ, ಕತ್ತೆಗಿರುವ ಗೌರವವನ್ನು ಸಹ ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ. ಕತ್ತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಆಗ ಸಚಿವ ಕೃಷ್ಣ ಬೈರೆಗೌಡ ಮಾತನಾಡಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡಿ. ಸಿಎಂ ಬೆಂಗಳೂರಿನ ಕಾರ್ಯಕ್ರಮದಲ್ಲಿದ್ದಾರೆ. ಅವರು ಬಂದ ಕೂಡಲೇ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ಸಿಎಂರಿಂದ ಉತ್ತರ ಕೊಡಿಸುವ ಭರವಸೆ
ಇಷ್ಟಾದರೂ ಗದ್ದಲ ನಿಲ್ಲದೇ ಇದ್ದಾಗ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ, ಸದನದ ಕಲಾಪವನ್ನು ನಡೆಸಲು ಬಿಡಿ. ಇದೇ ರೀತಿಯಾದರೆ ಸದನವನ್ನು ಮುಂದೂಡುತ್ತೇನೆ. ಏನ್ ಹುಡುಗಾಟಿಕೆ ಮಾಡಿಕೊಂಡಿದ್ದೀರಿ? ಎಂದು ಗರಂ ಆದರು. ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತರ ಕೊಡಿಸುವ ಭರವಸೆ ಸಿಕ್ಕ ಮೇಲೆ ಪ್ರತಿಪಕ್ಷಗಳು ಧರಣಿಯನ್ನು ವಾಪಸ್ ಪಡೆದವು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ಮಂಜೂರಾದ ಹುದ್ದೆಗಳು – 2,82,862
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 2,16,803
ಖಾಲಿ ಹುದ್ದೆಗಳು- 66,059
ಒಳಾಡಳಿತ ಇಲಾಖೆ
ಮಂಜೂರಾದ ಹುದ್ದೆಗಳು – 1,26,913
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -1,03,356
ಖಾಲಿ ಹುದ್ದೆಗಳು – 23,557
ಉನ್ನತ ಶಿಕ್ಷಣ ಇಲಾಖೆ
ಮಂಜೂರಾದ ಹುದ್ದೆಗಳು – 24,785
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -12,111
ಖಾಲಿ ಹುದ್ದೆಗಳು- 12,674
ಆರೋಗ್ಯ ಮತ್ತು ವೈದ್ಯಕೀಯ
ಮಂಜೂರಾದ ಹುದ್ದೆಗಳು – 74,857
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -40,213
ಖಾಲಿ ಹುದ್ದೆಗಳು- 34,644
ಕಂದಾಯ ಇಲಾಖೆ
ಮಂಜೂರಾದ ಹುದ್ದೆಗಳು – 32,309
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -21,688
ಖಾಲಿ ಹುದ್ದೆಗಳು – 10,621
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಮಂಜೂರಾದ ಹುದ್ದೆಗಳು – 6,940
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು -3,710
ಖಾಲಿ ಹುದ್ದೆಗಳು – 3,230
ಆರ್ಥಿಕ ಇಲಾಖೆ
ಮಂಜೂರಾದ ಹುದ್ದೆಗಳು – 18,892
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 10,113
ಖಾಲಿ ಹುದ್ದೆಗಳು – 8,779
ಕೃಷಿ ಇಲಾಖೆ
ಮಂಜೂರಾದ ಹುದ್ದೆಗಳು – 10,324
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 4,008
ಖಾಲಿ ಹುದ್ದೆಗಳು – 6,316
ಪಶುಸಂಗೋಪನೆ ಇಲಾಖೆ
ಮಂಜೂರಾದ ಹುದ್ದೆಗಳು – 19,610
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 8,581
ಖಾಲಿ ಹುದ್ದೆಗಳು – 11,029
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಮಂಜೂರಾದ ಹುದ್ದೆಗಳು – 10,986
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 5,248
ಖಾಲಿ ಹುದ್ದೆಗಳು – 5,738
ಗ್ರಾಮೀಣಾಭಿವೃದ್ಧಿ ಇಲಾಖೆ
ಮಂಜೂರಾದ ಹುದ್ದೆಗಳು – 28,223
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 17,814
ಖಾಲಿ ಹುದ್ದೆಗಳು – 10,409
ಲೋಕೋಪಯೋಗಿ ಇಲಾಖೆ
ಮಂಜೂರಾದ ಹುದ್ದೆಗಳು – 16,635
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 10,602
ಖಾಲಿ ಹುದ್ದೆಗಳು – 6,033
ನೀರಾವರಿ ಇಲಾಖೆ
ಮಂಜೂರಾದ ಹುದ್ದೆಗಳು – 10,623
ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು – 6,401
ಖಾಲಿ ಹುದ್ದೆಗಳು – 4,222
ಒಟ್ಟು 2,47,558 ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿಗೆ ರಾಜ್ಯ ಸರ್ಕಾರ ಚಿಂತನೆಯನ್ನೇ ನಡೆಸಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಸಹ ಯಾವುದೇ ನೋಟಿಫಿಕೇಶನ್ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.