ಚಂಡೀಗಢ: ವಿಧಾನಸಭೆ ಚುನಾವಣೆ ಹೊತ್ತಲ್ಲೇ ರೈತರ ಮತಗಳ ಮೇಲೆ ಕಣ್ಣಿಟ್ಟಿರುವ ಹರಿಯಾಣ ಬಿಜೆಪಿ ಸರಕಾರ, ರಾಜ್ಯದಲ್ಲಿ ಬೆಳೆಯುವ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ನಿರ್ಧಾರ ಪ್ರಕಟಿಸಿದೆ.
‘ವಿಜಯ ಶಂಖನಾದ’ ರ್ಯಾಲಿಯಲ್ಲಿ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ‘‘10 ವರ್ಷದ ಬಿಜೆಪಿ ಆಡಳಿತದ ಸಾಧನೆಯ ಭಾಗವಾಗಿ ರಾಜ್ಯದಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ನೀಡಲಾಗುವುದು,’’ ಎಂದು ಘೋಷಿಸಿದರು.
ರಾಜ್ಯ ಸರಕಾರ ಇಲ್ಲಿಯವರೆಗೂ 14 ಬೆಳಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುತ್ತಿದ್ದು, ಹೊಸದಾಗಿ 9 ಬೆಳೆಗಳಿಗೆ ಬೆಂಬಲ ಬೆಲೆ ವಿಸ್ತರಿಸಲು ನಿರ್ಧರಿಸಿದೆ. ಇದರೊಂದಿಗೆ ದೇಶದಲ್ಲಿ ಅತ್ಯಧಿಕ ಬೆಳೆಗೆ ಬೆಂಬಲ ಬೆಲೆ ನೀಡಿದ ರಾಜ್ಯ ಎಂಬ ಕೀರ್ತಿಗೆ ಹರಿಯಾಣ ಪಾತ್ರವಾಗಲಿದೆ.
ರಾಜ್ಯದ ನೀರಾವರಿ ಭೂಮಿ ಹೊಂದಿದ ರೈತರ 137 ಕೋಟಿ ರೂ. ನೀರಿನ ಬಾಕಿ ಶುಲ್ಕವನ್ನು ಸರಕಾರ ಮನ್ನಾ ಮಾಡಿದೆ. ಜತೆಗೆ 2023ರಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ.