ವಿಧಾನಸಭೆ: ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರ ಕನಕಪುರದಲ್ಲಿ ಒಂದು ಲೋಡ್ ಮೇವು ತರುತ್ತಿದ್ದು, ರೈತರಿಗೆ ಹಂಚುವಾಗ ಹೊಡೆದಾಟಗಳೇ ಆಯ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಈ ರೀತಿಯ ಪರಿಸ್ಥಿತಿ ಇದ್ದು, ರಾಜ್ಯದ 7,612 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೆಂಗಳೂರಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ.
ಟ್ಯಾಂಕರ್ ಮಾಫಿಯಾ ಹೆಚ್ಚಾಗಿದೆ ಎಂದು ಹೇಳಿದ್ದಾರೆ.ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾದರೆ ಸರ್ಕಾರದ ಜೊತೆ ನಿಲ್ತೇವೆ. 15ನೇ ಹಣಕಾಸು ಆಯೋಗದಲ್ಲಿ ಶೇಕಡಾ 10ರಷ್ಟು ಪಾಲು ಸಿಗುತ್ತಿದ್ದು, 14ನೇ ಹಣಕಾಸು ಆಯೋಗಕ್ಕಿಂತಲೂ ಶೇ. 2.5ರಷ್ಟು ಹೆಚ್ಚಿಗೆ ಸಿಕ್ಕಿದೆ. ಇದು ಎಲ್ಲ ರಾಜ್ಯಗಳಿಗೂ ಅನುಕೂಲ, ಪ್ರೋತ್ಸಾಹ ಕೊಡುವ ಅಂಶ. ಪದೇಪದೆ ಅನ್ಯಾಯವಾಗಿದೆ ಅಂತಾ ಕಾಲು ಕೆರೆದುಕೊಂಡು ಹೋಗ್ತಾರೆ. ಎಲ್ಲಿಂದ ಸಹಕಾರ ಪಡೆಯಲು ಸಾಧ್ಯ ಎಂದಿದ್ದಾರೆ.
ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಹೇಳಿದ್ದು, ಮಾಹಿತಿಯಲ್ಲಿ ಸುಳ್ಳಿದ್ದರೆ ರಾಜಕೀಯ ನಿವೃತ್ತಿ ಎಂದು ಸಿಎಂ ಹೇಳಿದ್ದಾರೆ. ನೀವು ರಾಜಕೀಯ ನಿವೃತ್ತಿ ಪಡೆಯಿರಿ ಅಂತಾ ಹೇಳುತ್ತಿಲ್ಲ. ವಾಸ್ತವಾಂಶ ಚರ್ಚಿಸೋಣ, ಅನ್ಯಾಯ ಆಗಿದ್ದರೆ ನಿಮ್ಮ ಜೊತೆ ನಿಲ್ಲುತ್ತೇವೆ. ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದ್ದರೆ ಅಂಕಿ ಅಂಶ ಮುಂದಿಡಿ ಎಂದರು.