ಬೆಂಗಳೂರು: ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ಸ್ಬಲ್ಪ ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ಯಾರಿಗಾದರೂ ನೋವು ಉಂಟು ಮಾಡಿದ್ದಲ್ಲಿ ಅದಕ್ಕೆ ವಿಷಾದ ವ್ಯಕ್ತಪಡಿಸಲು ಸಿದ್ಧ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ನಗರದ ಜೆಪಿ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪಿಕ್ ಪಾಕೆಟ್ ಗ್ಯಾರಂಟಿ ಪ್ಯಾಕೇಜ್ ಆಗಿದೆ. ತುಮಕೂರಿನಲ್ಲಿ ಗ್ಯಾರಂಟಿ ಕುರಿತಾಗಿ ನಾನು ನೀಡಿದ್ದ ಹೇಳಿಕೆ ತಿರುಚಲಾಗಿದ್ದು, ನನ್ನ ವಿರುದ್ಧ ಗೋಬ್ಯಾಕ್ ಕುಮಾರಸ್ವಾಮಿ ಪ್ರತಿಭಟನೆ ಮಾಡಿದ್ದಾರೆ ಮಂಡ್ಯದಲ್ಲಿ. ಹಣ ಕೊಟ್ಟಿದ್ದಕ್ಕೆ ಬಂದಿದ್ದೇವೆ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ಹೇಳಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೇಮಮಾಲಿನಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದು ಮಹಿಳೆಯರಿಗೆ ಕೊಡುವ ಗೌರವವೇ? ಇವರು ಮಹಿಳೆಯರಿಗೆ ಗೌರವ ಕೊಡುವ ಮಹಾನುಭಾವರೇ? ಎಂದು ಪ್ರಶ್ನಿಸಿದರು.
ಎರಡು ಸಾವಿರಕ್ಕೆ ಮರುಳಾಗಬೇಡಿ, ದಾರಿ ತಪ್ಪಬೇಡಿ ಎಂದಿದ್ದೇನೆ. ನನ್ನ ಕಾರ್ಯಕ್ರಮ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯಕ್ರಮವಾಗಿದೆ. ನಾನು ಅಶ್ಲೀಲವಾದ ಪದ ಎಲ್ಲಿ ಬಳಕೆ ಮಾಡಿದ್ದೇನೆ? ನನ್ನ ಬಗ್ಗೆ ಯಾವ ವಿಚಾರ ಇಲ್ಲ ರಾಜಕೀಯ ಮಾಡಲು. ಅದಕ್ಕೆ ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತುಮಕೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಿಳೆಯರ ಬಗ್ಗೆ ಅಪಮಾನ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ತರಾತುರಿಯಲ್ಲಿ ಎಲ್ಲಾ ನಾಯಕರ ಜೊತೆಗೆ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂಧಿರಾ ಗಾಂಧಿ ಹತ್ಯೆ ಸಂದರ್ಭದಲ್ಲಿ ದುಖಃ ಪಟ್ಟಿದ್ದು ಬಿಟ್ಟರೆ ಇವಾಗ ಎರಡನೇ ಬಾರಿ ಬೇಸರ ಪಟ್ಟಿದ್ದೇನೆ ಎಂದಿದ್ದಾರೆ. ಅಲ್ಲದೆ ಮಹಿಳೆಯರ ಪರವಾಗಿ ಕಂಬನಿ ಮಿಡಿದಿದ್ದಾರೆ. ಎರಡು ಕುಟುಂಬದ ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಳ್ಳುವಾಗ ದುಖಃ ಪಟ್ಟಿಲ್ಲವೇ? ಎಂದು ಪ್ರಶ್ನಿಸಿದರು.