ವಿಜಯಪುರ : ಗುರುವಾರ ಸಂಜೆ ಇಲ್ಲಿನ ಜೆಎಂ ರಸ್ತೆಯಲ್ಲಿರುವ ಮೆಹತರ್ ಮಹಲ್ ಮಿನಾರ್ ಗೆ ಸಿಡಿಲು ಬಡಿದಿದ್ದರಿಂದ ಗೋಪುರದ ಕಲ್ಲುಗಳು ಕೆಳಗೆ ನಿಲ್ಲಿಸಿದ್ದ ವಾಹನಗಳ ಮೇಲೆ ಅಪ್ಪಳಿಸಿದ್ದರಿಂದ ವಾಹನಗಳು ಜಖಂಗೊಂಡಿವೆ.
ಸಿಡಿಲಿನ ಆರ್ಭಟಕ್ಕೆ ಮಿನಾರ್ ನ ಬೃಹತ್ ಕಲ್ಲು ಕಾರು ಹಾಗೂ ಬೈಕ್ ಗಳ ಮೇಲೆ ಬಿದ್ದಿದ್ದರಿಂದ ಅವು ಜಖಂಗೊಂಡಿವೆ. ಆದರೆ ಪ್ರಾಣ ಹಾನಿಯಾಗಿಲ್ಲ.
ಪ್ರಖರ ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಯ ಜನತೆಗೆ ಗುರುವಾರ ಸಂಜೆ ಸುರಿದ ಮಳೆ ಕೊಂಚ ತಂಪನ್ನುಂಟು ಮಾಡಿತು.
ಸಂಜೆ 5.30 ಕ್ಕೆ ಭಯಂಕರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು.
ನಂತರ ಬಿರುಗಾಳಿ ಸಮೇತ ಮಳೆ ತನ್ನ ಆರ್ಭಟ ಪ್ರದರ್ಶನವನ್ನೇ ನೀಡಿತು. ಬಿರುಗಾಳಿ ಮಿಶ್ರಿತ ಮಳೆಗೆ ವಾಹನ ಸವಾರರು ಅಕ್ಷರಶಃ ಪರದಾಡಿದರು.
*ವಾಹನ ಸಂಚಾರ ಸ್ಥಗಿತ:* ಭೀಕರ ಬಿರುಗಾಳಿ ಮಿಶ್ರಿತ ಮಳೆಗೆ ಕೆಲ ಕಾಲ ಬಸ್, ಆಟೋ ಹಾಗೂ ಭಾರೀ ವಾಹನಗಳು ಸಂಚಾರ ಸ್ಥಗಿತಗಿಳಿಸಿದವು. ಮುಂದೇ ಏನೂ ಕಾಣದ್ದರಿಂದ ಚಾಲಕರು ಕೆಲ ಕಾಲ ವಾಹನ ನಿಲ್ಲಿಸುವಂತಾಯಿತು.
*ಕಿತ್ತು ಹೋದ ಬ್ಯಾನರ್, ಕಟೌಟ್ :* ಬಿರುಗಾಳಿ ಮಿಶ್ರಿತ ಮಳೆಗೆ ನಗರದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟಿದ್ದ ಪ್ರಮುಖ ಪಕ್ಷ ಅಭ್ಯರ್ಥಿಗಳು ಹಾಗೂ ರಾಜಕೀಯ ನೇತಾರರ ಬ್ಯಾನರ್ ಹಾಗೂ ಕಟೌಟ್ ಗಳನ್ನು ವರುಣನೇ ತೆರುವುಗೊಳಿಸಿದಂತಾಯಿತು.
*ಜನಜೀವನ ಅಸ್ತವ್ಯಸ್ತ :* ಭೀಕರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿತು. ಮಳೆ, ಬಿರುಗಾಳಿ ಹಾಗೂ ಸಿಡಿಲಿನಿಂದ ಪಾರಾಗಲು ಅಲ್ಲಲ್ಲಿ ಆಸರೆ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
*ಹರ್ಷಗೊಂಡ ಜನತೆ*: ಬಿರು ಬಿಸಿಲಿನಿಂದ ಬೆಂಕಿಯ ಕೆನ್ನಾಲಿಗೆಯಲ್ಲಿ ನಿತ್ಯವೂ ಬೇಯುತ್ತಿದ್ದ ಜನತೆಗೆ ಗುರುವಾರ ಸುರಿದ ಮಳೆ ತಂಪನೆರಚಿತು. ಇದರಿಂದಾಗಿ ಜನತೆ ಸಮಾಧಾನದ ನಿಟ್ಟುಸಿರು ಬಿಟ್ಟರು. ಇಂದು ಮಾತ್ರವಲ್ಲ, ದಿನಾಲು ಮಳೆಯಾಗಲಿ ಎಂಬ ಮಾತುಗಳು ಹೊಟೇಲ್, ಅಂಗಡಿ-ಮುಂಗಟ್ಟು ಮತ್ತಿತರೆಡೆಗಳಲ್ಲಿ ಮಳೆಯಿಂದ ಆಸರೆ ಪಡೆದಿದ್ದ ಜನರಿಂದ ಕೇಳಿಬಂದವು.