ರಾಮನಗರ: ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಬೆಂಗಳೂರು–ಮೈಸೂರು ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆಯು ಜಲಾವೃತಗೊಂಡಿದ್ದು, ವಾಹನಗಳ ಸವಾರರು ಪರದಾಡಿದರು.
ಸಂಜೆ 5ರ ಸುಮಾರಿಗೆ ಆರಂಭವಾದ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹೊರವಲಯದ ಹೆದ್ದಾರಿಯ ಕೆಂಪನಹಳ್ಳಿ ಗೇಟ್‌ನಿಂದ, ಕಲ್ಲುಗೋಪಹಳ್ಳಿ, ದಾಸಪ್ಪನದೊಡ್ಡಿ ಬಳಿಯ ರಸ್ತೆ ಕೆಳ ಸೇತುವೆಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡಿತ್ತು.
ಹೆಚ್ಚಿನ ನೀರು ಸಂಗ್ರಹಗೊಂಡಿದ್ದರಿಂದ ಸರ್ವೀಸ್ ರಸ್ತೆಗಳಲ್ಲಿ ಹೋಗುತ್ತಿದ್ದ ದ್ವಿಚಕ್ರ ಹಾಗೂ ಇತರ ವಾಹನಗಳ ಸವಾರರು ವಿಧಿ ಇಲ್ಲದೆ ಮಳೆಯಲ್ಲೇ ನೆನೆಯುತ್ತಾ ಕಾಯಬೇಕಾಯಿತು. ಇದರಿಂದಾಗಿ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ, ಸಂಚಾರ ದಟ್ಟಣೆ ಉಂಟಾಯಿತು.
‘ಬೆಂಗಳೂರು–ಮೈಸೂರು ಹೆದ್ದಾರಿಯು ಸಂಚಾರಕ್ಕೆ ಮುಕ್ತವಾದಾಗಿನಿಂದಲೂ ಇದೇ ಸಮಸ್ಯೆ ಇದೆ. ಕಳೆದ ವರ್ಷ ಮಳೆಗಾಲದಲ್ಲಿ ಭಾರೀ ಪ್ರಮಾಣದ ನೀರು ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ಎರಡೂ ಕಡೆ ನಿಂತುಕೊಂಡಿತ್ತು. ವಾಹನಗಳು ಸಹ ಜಲಾವೃತಗೊಂಡಿದ್ದವು. ಇದೀಗ, ಅಕಾಲಿಕ ಮಳೆಗೆ ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಹಲವರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಗಾಣಕಲ್ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.