ಬಾಗಲಕೋಟೆ
ಜಿಲ್ಲಾದ್ಯಂತ ಗುರುವಾರ ಸುರಿದ ಮಳೆ ಭಾರಿ ಆವಾಂತರ ಸೃಷ್ಟಿಸಿದ್ದು, ತುಳಸಿಗೇರಿ, ಹಿರೇಶೆಲ್ಲಿಕೇರಿ, ದೇವಾನಳ ಗ್ರಾಮಗಳಲ್ಲಿ ಅಪಾರ ಹಾನಿಯಾಗಿದೆ. ಅಲ್ಲದೇ ತೋಟಗಾರಿಕೆ ಬೆಳೆಗಳಿಗೂ ಹೊಡೆತ ಬಿದ್ದಿದೆ.
ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಧ್ಯಾಹ್ನ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದೆ. ಗಾಳಿ ಹಾಗೂ ಮಳೆಯಿಂದಾಗಿ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಗ್ರಾಮಗಳಲ್ಲಿ ಮನೆಗಳ ಪತ್ರಾಸ್ ಹಾರಿಹೋಗಿವೆ.
ಹಾರಿದ ಪತ್ರಾಸ್
ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ಮರ ಉರುಳಿ ಎಮ್ಮೆ ಮೃತಪಟ್ಟಿದೆ. ಗ್ರಾಮದ ದೊಡ್ಡಸಿದ್ದಪ್ಪ ಕೋಲಾರ ಅವರ ಹೊಲದಲ್ಲಿ ಕಟ್ಟಲಾಗಿದ್ದ ಎಮ್ಮೆಯ ಮೇಲೆ ಮರ ಉರುಳಿಬಿದ್ದಿದೆ. ತುಳಸಿಗೇರಿ ಭಾಗದಲ್ಲಿ ಭಾರಿ ಗಾಳಿ ಬೀಸಿದ ಪರಿಣಾಮ ಮನೆಗಳ ಮೇಲಿನ ತಗಡಿನ ಚಾವಣಿ ಹಾರಿಹೋಗಿವೆ. ಶ್ರೀಶೈಲ ಕಂಕಣವಾಡಿ, ಕಶ ದಾಸರ, ನಾಗೇಶ ಕಂಕಣವಾಡಿ, ಸುರೇಶ ಕಂಕಣವಾಡಿ, ಭೀಮಪ್ಪ ಕಂಕಣವಾಡಿ ಅವರ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಆಲಿಕಲ್ಲು ಮಳೆ ಸುರಿದ ಪರಿಣಾಮ ತಗಡಿನ ಚಾವಣಿಗಳು ಹಾನಿಗೊಳಗಾಗಿವೆ.
ವಿದ್ಯುತ್ ಕಂಬಗಳಿಗೆ ಹಾನಿ: ಗ್ರಾಮದ ಸುಪ್ರಸಿದ್ಧ ಆಂಜನೇಯ ದೇವಸ್ಥಾನದ ಆವರಣದ ಅಂಗಡಿಗಳ ಶೆಡ್ ಹಾರಿಹೋಗಿವೆ. ಹಲವೆಡೆ ಬೃಹತ್ ಮರಗಳ ಟೊಂಗೆಗಳು, ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಆಲಿಕಲ್ಲು ಮಳೆಯಿಂದ 3 ಎಕರೆ ಕಬ್ಬು, ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆ, ಟೊಮೆಟೊ ಹಾನಿಗೀಡಾಗಿವೆ. ದಾಳಿಂಬೆ, ಪಪ್ಪಾಯಿ, ಚಿಕ್ಕು, ಕಬ್ಬು ಬೆಳೆ ನಾಶವಾಗಿವೆ. ಜಿಲ್ಲೆಯ ಇಳಕಲ್‌ನಲ್ಲಿ ಎರಡು ಗಂಟೆಯವರೆಗೆ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ನೀರು ಆವರಿಸಿತು. ಹಳ್ಳಗಳು ತುಂಬಿ ಹರಿದಿದ್ದು, ಹೊಲಗಳಿಗೆ ನೀರು ನುಗ್ಗಿದೆ. ಜಮಖಂಡಿ, ಮುಧೋಳ, ಬೇವೂರ, ಲೋಕಾಪೂರಗಳಲ್ಲಿ ಮಳೆಯಾಗಿದೆ. ಮುಧೋಳ ತಾಲೂಕಿನ ಕುಳಲಿಯಲ್ಲಿ ಸಿಡಿಲು ಬಡಿದು ಬಣವೆಗೆ ಬೆಂಕಿ ಹೊತ್ತಿಕೊಂಡಿತ್ತು. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಬ್ಯಾರೇಜ್‌ನಿಂದ ನೀರು
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಬಿಡಲಾಗಿದೆ. ಮಳೆ ಹೆಚ್ಚಾಗಿರುವ ಕಾರಣ ಬ್ಯಾರೇಜ್‌ನಲ್ಲಿ ಸಂಗ್ರಹಗೊಂಡ ಹೆಚ್ಚುವರಿ ನೀರನ್ನು ಮಹಾರಾಷ್ಟ್ರ ಹೊರಹಾಕುತ್ತಿದೆ ಎನ್ನಲಾಗಿದೆ. ಅಂದಾಜು 1, 200 ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಇನ್ನೆರಡು ದಿನ ಗಳಲ್ಲಿ ಹಿಪ್ಪರಗಿ ಬ್ಯಾರೇಜ್ ತಲುಪುವ ಸಾಧ್ಯತೆಯಿದೆ. ಬರದಿಂದ ಕೃಷ್ಣಾ ನದಿ ಬರಿದಾಗಿದ್ದು, ಕೊಯ್ತಾ ಜಲಾಶಯದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುಗಡೆಗೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ಬೇಡಿಕೆ ಈಡೇರಿಲ್ಲ.
- ಹೆದ್ದಾರಿಯಲ್ಲಿ ನೀರೋ ನೀರು
ಅಮೀನಗಡ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತು ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಗುರುವಾರ ನಸುಕಿನ ಜಾವವೇ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಿ ಕೆಲವೆಡೆ ಗಿಡ ಮರಗಳು ಬಿದ್ದವು. ಮಧ್ಯಾಹ್ನ ಅರ್ಧ ಗಂಟೆ ಭರ್ಜರಿ ಮಳೆ ಸುರಿದು ಹಲವೆಡೆ ಅವಾಂತರ ಸೃಷ್ಟಿಸಿತು. ರಾಜ್ಯ ಹೆದ್ದಾರಿಯ ಚಿತ್ತರಗಿ ಕ್ರಾಸ್ ಬಳಿ ಮಳೆ ನೀರು ನಿಂತು ಸವಾರರು ತೊಂದರೆ ಪಡುವಂತಾಯಿತು. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ ಹೆದ್ದಾರಿಯಲ್ಲಿ ನಿಂತ ನೀರನ್ನು ಚರಂಡಿ ಸೇರಿಸಲು ಹರಸಾಹಸ ಪಡಬೇಕಾಯಿತು.