ಬೆಂಗಳೂರು: ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಬೆನ್ನಲ್ಲೇ ಹೈಕೋರ್ಟ್ ಬಡಾವಣೆ ನಿರ್ಮಾಣದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಜತೆಗೆ, ಕೋರ್ಟ್ ಅನುಮತಿ ಇಲ್ಲದೆ ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸಬಾರದು ಎಂದು ಸರ್ಕಾರಮತ್ತು ಬಿಡಿಎಗೆ ನಿರ್ದೇಶನ ನೀಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಗುರುವಾರ ಈ ಆದೇಶ ಮಾಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಅಧಿಸೂಚನೆ ಹೊರಡಿಸದಂತೆ ಆದೇಶಿಸಿದೆಯಾದರೂ ಬಡಾವಣೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದ್ದು,ಬಡಾವಣೆಯ ಸಮಸ್ಯೆಗಳನ್ನು ಪರಿಹರಿಸದೇ ಬಿಡಿಎಯಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸದಂತೆ ನಿರ್ಬಂಧ ವಿಧಿಸಿದೆ.
ಶಿವರಾಮ ಕಾರಂತ ಬಡಾವಣೆಯ ದಾಖಲೆಗಳನ್ನು ನ್ಯಾ.ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿ ತನ್ನ ಬಳಿಯೇ ಇರಿಸಿಕೊಂಡಿದ್ದು, ಸುಪ್ರೀಂಕೋರ್ಟ್‌ನ ಆದೇಶದಂತೆ ಸಮಿತಿ ದಾಖಲೆಗಳನ್ನು ಬಿಡಿಎಗೆ ಹಸ್ತಾಂತರಿಸಿಲ್ಲ. ದಾಖಲೆಗಳಿರುವ ಕೊಠಡಿಯ ಬೀಗದ ಕೀ ಸಮಿತಿಯ ಬಳಿ ಇದೆ ಎಂದು ಬಿಡಿಎ ವಾದ ಮಂಡಿಸಿರುವ ಹಿನ್ನೆಲೆಯಲ್ಲಿಆ ಕೊಠಡಿಗೆ ಮತ್ತೊಂದು ಬೀಗ ಹಾಕಿ ಆ ಕೀ ಅನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನೀಡುವಂತೆ ನ್ಯಾಯಾಲಯ ಬಿಡಿಎಗೆ ಸೂಚನೆ ನೀಡಿದೆ ಎಂದು ಮಾಹಿತಿ ಕಂಡು ಬಂದಿದೆ.