ಬೆಂಗಳೂರು: ಅಪೆಕ್ಸ್ ಬ್ಯಾಂಕ್ಗೆ ಸಾಲ ಪಾವತಿಸದೇ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸೂಚಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ತಮ್ಮ ವಿರುದ್ಧ ದಾಖಲಾಗಿರುವ ಸಹಕಾರಿ ಬ್ಯಾಂಕ್ಗೆ ವಂಚನೆ ಪ್ರಕರಣವನ್ನು ರದ್ದುಕೋರಿ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಈ ವೇಳೆ ಸರ್ಕಾರದ ಪರ ಎಸ್ಪಿಪಿ ಬ್ಯಾತ ಎನ್ ಜಗದೀಶ್ ವಾದ ಮಾಡಿ ಸಿಐಡಿ ನೋಟಿಸ್ ನೀಡಿದರೂ ತನಿಖೆಗೆ ಹಾಜರಾಗಿಲ್ಲ ಎಂದು ಹೈಕೋರ್ಟ್ಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್, ತನಿಖೆಗೆ ಸಹಕರಿಸಬೇಕೆಂದು ಜಾರಕಿಹೊಳಿ ಸೂಚಿಸಿದೆ. ಇನ್ನು ವಿಚಾರಣೆಗೆ ಹಾಜರಾದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸದಂತೆ ಸಿಐಡಿಗೆ ಸೂಚಿಸಿದೆ. ಇದರಿಂದ ರಮೇಶ್ ಜಾರಕಿಹೊಳಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿಗಾಗಿ ಅಪೆಕ್ಸ್ ಬ್ಯಾಂಕ್‍ನಿಂದ 232 ಕೋಟಿ 88 ಲಕ್ಷ rಊಪಾಯಿ ಸಾಲ ಪಡೆದಿದ್ದರು. ಆದ್ರೆ, ಸಾಲವನ್ನು ವಾಪಸ್ ಕಟ್ಟಿಲ್ಲ. ಹೀಗಾಗಿ ಸಾಲ ಮರುಪಾವತಿಸದೇ ಬ್ಯಾಂಕ್ಗೆ ವಂಚನೆ ಮಾಡಿದ್ದಾರೆ ಎಂದು ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದರು. ಆದ್ರೆ, ಈ ದೂರು ರದ್ದುಗೊಳಿಸುವಂತೆ ರಮೇಶ್ ಜಾರಕಿಹೊಳಿ ಹೈಕೋರ್ಟ್ ಮೆಟ್ಟಿಲೇರಿದ್ದು, ಕಂಪನಿಯ ಹುದ್ದೆಗಳಿಗೆ ರಾಜಿನಾಮೆ ನೀಡಿ ಹೊಸಬರ ನೇಮಕವಾಗಿದೆ. ಎನ್ಸಿಎಲ್ಟಿಯಲ್ಲಿ ವಿಚಾರಣೆ ಇರುವಾಗ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‍ನಿಂದ ಬೆಳಗಾವಿಯ ಗೋಕಾಕ್‍ನ ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಅವರು ಸಾಲ ಪಡೆದಿದ್ದು, 2013 ರಿಂದ 2017 ರವರೆಗೆ 232 ಕೋಟಿ 88 ಲಕ್ಷ ರೂ. ಸಾಲ ಪಡೆದಿದ್ದಾರೆ. ಅಲ್ಲದೇ ಬೇರೆ ಬೇರೆ ಜಿಲ್ಲೆಗಳ ಅಪೆಕ್ಸ್ ಬ್ಯಾಂಕ್‍ನ ಸಮೂಹ ಬ್ಯಾಂಕ್‍ಗಳಲ್ಲೂ ಸಾಲ ಪಡೆದಿರುವ ಅವರು, 439 ಕೋಟಿ 7 ಲಕ್ಷ ರೂ. ಸಾಲ ಬಾಕಿ ಉಳಿಸಿಕೊಂಡಿದ್ದು, ಸಾಲ ಮರುಪಾವತಿಸದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ರಾಜಣ್ಣ (56) ಅವರು ಶುಕ್ರವಾರ ದೂರು ದಾಖಲಿಸಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.