ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಜಮೀನು ಸ್ವಾಧೀನಪಡಿಸಿಕೊಳ್ಳುವುದಕ್ಕೂ ಮುನ್ನ ಎಷ್ಟು ಪ್ರಮಾಣದ ಭೂಮಿ ಅಗತ್ಯವಿದೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಹೈಕೋರ್ಟ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಆದೇಶಿಸಿದೆ ಎಂದು ತಿಳಿದೆ.
ಕೆಐಎಡಿಬಿ ಭೂಸ್ವಾಧೀನ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಕೊಂಡಾರೆಡ್ಡಿಪಾಳ್ಯದ ಎಚ್.ಎಸ್. ಅಬ್ದುಲ್ ರಿಯಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದ್ದು,ರಾಜ್ಯದ ಸೂಕ್ತ ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಪಡಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯಿದೆ-1996 ಅನ್ನು ಸರಕಾರ ಜಾರಿಗೊಳಿಸಿದೆ.
ಇದರ ಉದ್ದೇಶ ಸಾಧಿಸಲು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿದ್ದು, ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಹಾಗೂ ಸೂಕ್ತ ಜಾಗ ಗುರುತಿಸುವುದು ಮತ್ತು ಒದಗಿಸುವುದು ಮಂಡಳಿಯ ಆದ್ಯ ಕರ್ತವ್ಯ ಎಂದು ಹೇಳಿದ್ದು, ಹಲವು ಸಂದರ್ಭದಲ್ಲಿ ಮಂಡಳಿ ತನ್ನ ಪ್ರಾಥಮಿಕ ಅಧಿಸೂಚನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿ, ಅಂತಿಮ ಅಧಿಸೂಚನೆ ಪ್ರಕಟಿಸುವಾಗ ಉದ್ದೇಶಿತ ಪ್ರಮಾಣದ ಪೈಕಿ ಶೇ.50ಕ್ಕಿಂತ ಕಡಿಮೆ ಸ್ವಾಧೀನಪಡಿಸಿಕೊಳ್ಳುತ್ತದೆ. ಇದು ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗುವ ಮುನ್ನ ಕೆಐಎಡಿಬಿ ಸೂಕ್ತ ಅಧ್ಯಯನ ನಡೆಸದೆ ಇರುವುದನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಪೀಠ ಸೂಚಿಸಿದೆ.