ಕ್ಷಯ ರೋಗ ನಿರ್ಮೂಲನೆಯಲ್ಲಿ ಮಹಿಳಾ ನಾಯಕತ್ವ
ನಿಮ್ಮ ಸುದ್ದಿ ಬಾಗಲಕೋಟೆ
ಮಹಿಳಾ ನಾಯಕತ್ವದಡಿ ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಮುಂದಾದ ಜಿಲ್ಲೆಯ 8 ಜನ ಮಹಿಳಾ ನಾಯಕಿಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.
ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಕೆ.ಎಚ್.ಪಿ.ಟಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಹಿಳಾ ನಾಯಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್.ಎಸ್.ಬೆಳಗಲಿ ಮಾತನಾಡಿ ಸಾಮಾನ್ಯರಲ್ಲಿ ಅಸಮಾನ್ಯರಾದ ಮಹಿಳೆಯರು ಸೇವಾ ಮನೋಭಾವನೆಯಿಂದ ಮುಂದೆ ಬಂದು ಸಮಾಜ ಸೇವೆಯಲ್ಲಿ ತೊಡಗಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ಮಹಿಳೆ ಹೊಸಲು ದಾಟಿ ಹೊರಗೆ ಬರಬೇಕು. ಸ್ವಾವಲಂಬನಾ ಜೀವನ ನಡೆಸುವಂತಾಗಬೇಕು. ಅಂತಹ ಮಹಿಳೆಯರಿಗೆ ಸ್ಪೂರ್ತಿ ನೀಡುತ್ತಿರುವ ಕೆ.ಎಚ್.ಪಿ.ಟಿ.ಸಿ ಕಾರ್ಯವನ್ನು ಶ್ಲಾಘೀಸಿದರು. ಕ್ಷಯರೋಗ ನಿರ್ಮೂಲನೆ ಸರಕಾರದ ಜೊತೆ ಕೈಜೋಡಿಸುವ ಕಾರ್ಯ ಮಹಿಳೆಯರು ಮಾಡುತ್ತಿದ್ದು, ಈ ಕಾರ್ಯ ನಿರಂತರವಾಗಿರಲೆಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಗಂಗಾಧರ ದಿವಟರ ಮಾತನಾಡಿ ನಮ್ಮ ಆಚಾರ, ವಿಚಾರ, ಸಂಪ್ರದಾಯದಂತೆ ನಡೆದುಕೊಳ್ಳುವರು ಮಹಿಳೆಯರೇ ಆಗಿದ್ದು, ಪ್ರತಿಯೊಂದು ಮಹಿಳೆಯರು ಪುರುಷರ ಕಾಳಜಿಯಲ್ಲಿ ತೊಡಗಿರುವುದನ್ನು ನಾವು ಕಾಣುತ್ತಿದ್ದೇವೆ. ಸಹನ ಶಕ್ತಿಯುಳ್ಳ ಮಹಿಳೆ ಇಂದು ಸಮುದಾಯದಲ್ಲಿನ ಬೇರುಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಸಂತೋಷವೆನಿಸುತ್ತಿದೆ ಎಂದರು.
ಸರಕಾರದ ಹಾಕಿಕೊಂಡ ಕಾರ್ಯಕ್ರಮಗಳಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ನಮ್ಮ ಮನೆ ಪರಿಸರ, ಸಮುದಾಯ, ಗ್ರಾಮ, ಪಟ್ಟಣದ ಆರೋಗ್ಯ ಕಾಪಾಡಲು ಮುಂದಾದ ಮಹಿಳೆಯರಿಗೆ ಸಾರ್ವಜನಿಕರ ಸಹಭಾಗಿತ್ವ ಸಹ ಮುಖ್ಯವಾಗಿದೆ. ಸಮಾಜದ ಆರೋಗ್ಯದ ದೃಷ್ಠಿಯಿಂದ ರೋಗವನ್ನು ಬೇಗ ಪತ್ತೆ ಹಚ್ಚುವಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದೆ. ಇಂತಹ ನಾಯಕರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಸಿರುವುದು ಸಂತೋಷದ ವಿಷಯ ಎಂದರು.
ಕೆ.ಎಚ್.ಪಿ.ಟಿ.ಯ ಕಾರ್ಯಕ್ರಮ ಸಂಯೋಜಕಿ ತೇಜಸ್ವಿನಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಬಾಗಲಕೋಟೆಯಲ್ಲಿ ಕ್ಷಯರೋಗಗಳು ಸಂಖ್ಯೆ ಹೆಚ್ಚಾಗುತ್ತಿರುವದನ್ನು ಕಂಡು ಅದರ ನಿರ್ಮೂಲನೆಗೆ ಮಹಿಳಾ ನಾಯಕತ್ವದಡಿ ಮಹಿಳೆಯರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಶೇ.30 ರಷ್ಟು ಈ ಕ್ಷಯ ರೋಗದಿಂದ ಸಾವನ್ನೊಪ್ಪುತ್ತಿದ್ದಾರೆ. ರಾಜ್ಯದ ಬಾಗಲಕೋಟೆಯಲ್ಲಿ 100ಕ್ಕೆ 30 ಜನ ಸಾಯುತ್ತಿದ್ದು, ಈ ಸಾವಿನ ಸಂಖ್ಯೆ ಕಡಿಮೆ ಮಾಡಲು ರೋಗ ಪತ್ತೆಗೆ ಆಂದೋಲ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಷಯ ರೋಗ ನಿರ್ಮೂಲನೆಗೆ ಸರಕಾರ ಸಾಕಷ್ಟು ಕಾರ್ಯಕ್ರಮ ರೂಪಿಸಿದ್ದು, ಸರಕಾರದ ಜೊತೆ ಕೈಜೋಡಿಸಲು ಮಹಿಳಾ ನಾಯಕತ್ವದಡಿ ಸಮುದಾಯದಲ್ಲಿ ಭಾಗವಹಿಸುವ ಮೂಲಕ ನಿರ್ಮೂಲನೆ ಮಾಡಲಾಗುತ್ತಿದೆ. ಕಳೆದ 3 ತಿಂಗಳಲ್ಲಿ 250 ಜನಕ್ಕೆ ಸ್ಕ್ರೀನಿಂಗ್ ಮಾಡಿಸಲಾಗಿದ್ದು, 120 ಜನರಿಗೆ ಪರೀಕ್ಷೆ ಮಾಡಿದಾಗ 22 ಜನರಲ್ಲಿ ಕ್ಷಯರೋಗ ಕಂಡುಬಂದಿರುವುದಾಗಿ ತಿಳಿಸಿದ ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ಕೊಡಿಸಲಾಗುತ್ತಿದೆ. ಎಸ್‍ಎಸ್‍ಜಿ ಮುಖಾಂತರ ಮನೆ ಮನೆಗೆ ಭೇಟಿ ನೀಡಿ ರೋಗ ಪತ್ತೆ ಹಚ್ಚು ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಟಿಬಿ ಕಾರ್ಯಕ್ರಮದ ವ್ಯವಸ್ಥಾಪಕ ನಿರ್ದೇಶಕ ಅಥಿಕ್, ಸಂಯೋಜಕ ಸಂಗಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಹಿಳಾ ನಾಯಕಿಯರು
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯ ಮಹಿಳಾ ನಾಯಕತ್ವದಡಿ ಜಿಲ್ಲೆಯ 8 ಜನ ಮಹಿಳಾ ನಾಯಕಿಯರನ್ನು ಸನ್ಮಾನಿಸಲಾಯಿತು. ರೇಖಾ ರೋಮಲರ್, ಸುಮಿತ್ರಾ ಬೋರಗಿ, ಗೌರವ್ವ ಮಲ್ಲಾಪೂರ, ಶ್ರೀದೇವಿ ಗೋರ್ಪಡೆ, ಸುಧಾ ಕೊಪ್ಪಲ್, ದೀಪಾ ಕಂದಿಕೊಂಡ, ಶಶಿಕಲಾ ಗೊರಕೆ, ದ್ರಾಕ್ಷಾಯಿಣಿ ಬಾಗಲಕೋಟೆ