ನಿಮ್ಮ ಸುದ್ದಿ ಬಾಗಲಕೋಟೆ
ಸಾವಯವ ಕೃಷಿಗಾಗಿ ತೋಟಗಾರಿಕೆ ಎಂಬ ಧ್ಯೆಯವಾಕ್ಯದೊಂದಿಗೆ ಇದೇ ಡಿಸೆಂಬರ್ ೨೯, ೩೦ ಮತ್ತು ೩೧ ರವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಮ್. ಇಂದಿರೇಶ ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಸಭಾ ಭವನದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾವಯವ ತೋಟಗಾರಿಕೆ ಚಿಂತನೆಗೆ ಪೂರಕ ಮತ್ತು ತೋಟಗಾರಿಕೆ ಕ್ಷೇತ್ರದ ಅಭಿವೃದ್ದಿಗೆ ಸಹಕಾರಿಯಾಗಿ ರೈತರಿಗೆ ಲಾಭವಾಗಲಿ ಎಂಬ ಉದ್ದೇಶದಿಂದ ತೋಟಗಾರಿಕೆ ಮೇಳವನ್ನು ಜರುಗಿಸಲಾಗುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಸಾವಯವ ಕೃಷಿಗಾಗಿ ತೋಟಗಾರಿಕೆ ಆಧಾರಿತ ಕೌಶಲ್ಯ ಅಭಿವೃದ್ಧಿ, ಸವಾಲುಗಳು ಹಾಗೂ ಅವಕಶಾಶಗಳು, ಹವಾಮಾನ ವೈಪರೀತ್ಯಗಳ ತಲ್ಲಣಗಳು, ತೋಟಗಾರಿಕೆ ಬೆಳೆಗಳಿಗೆ ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ಸಂಶೋಧನಾ ಕ್ರಮಗಳು, ಬೆಳೆಗಳ ಮಾರಾಟ ಮತ್ತು ರಫ್ತು ಅಭಿವೃದ್ಧಿಯಲ್ಲಿ ರೈತ ಉತ್ಪಾದನಾ ಸಂಸ್ಥೆಗಳ ಪಾತ್ರ ಸೇರಿದಂತೆ ಇತರ ವಿಷಯಗಳ ಕುರಿತು ಪರಿಣಿತರು ವಿಶೇಷವಾಧ ಮಾಹಿತಿಯನ್ನು ಸದರಿ ಮೇಳದಲ್ಲಿ ನೀಡಲಿದ್ದಾರೆ ಎಂದರು.
ನವನಗರ ಉದ್ಯಾನಗಿರಿಯಲ್ಲಿ ನಡೆಯಲಿರುವ ಮೇಳದಲ್ಲಿ ಒಟ್ಟು ೧೭೬ ಮಳಿಗೆಗಳನ್ನು ಹಾಕಲಾಗುತ್ತಿದ್ದು, ಸಸ್ಯ ಸಂರಕ್ಷಣೆಯಲ್ಲಿ ಡ್ರೋಣ ಬಳಕೆ, ಜೇನು ಕೃಷಿ-ಮಧುವನ, ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ, ಹೂವು ಹಾಗೂ ಅಲಂಕಾರಿಕೆ, ಸಸ್ಯಗಳ ಮೌಲ್ಯವರ್ಧನೆ, ಕೌಶಲ್ಯ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣ/ಉಪಕರಣ, ಪರಿಕರಗಳು ಹಾಗೂ ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನಗಳು ಈ ಬಾರಿಯ ಮೇಳದ ವಿಶೇಷತೆಗಳಾಗಿರುತ್ತವೆ ಎಂದು ತಿಳಿಸಿದರು.
ತೋಟಗಾರಿಕೆ ಮೇಳ ೨೦೨೨ಕ್ಕೆ ಡಿ. ೨೯ ರಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಚಾಲನೆ ನೀಡಲಿದ್ದು, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆಯನ್ನು ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ಸೇರಿ ಸ್ಥಳಿಯ ಶಾಸಕರು ಮತ್ತು ಜನಪ್ರತಿನಿಧಿಗಳು ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಮೊದಲನೆಯ ದಿನ ತೋವಿವಿ ಬಾಗಲಕೋಟೆ ಕಾರ್ಯವ್ಯಾಪ್ತಿಗೊಳಪಡುವ ಜಿಲ್ಲೆಗಳಿಂದ ಆಯ್ಕೆಯಾದ ೧೦, ಎರಡನೆ ದಿನ ೧೦ ಹಾಗೂ ಮೂರನೆ ದಿನದಂದು ೪ ರಂತೆ ಒಟ್ಟು ೨೪ ಪ್ರಗತಿಪರ ಶ್ರೇಷ್ಠ ತೋಟಗಾರಿಕೆ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪ್ರತಿ ದಿನವೂ ಸಾದಕ ರೈತರು ತಮ್ಮ ಅನುಭವಗಳನ್ನು ಇತರೇ ರೈತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಅಲ್ಲದೇ ವಿಜ್ಞಾನಿಗಳು ಪ್ರಗತಿಪರ ರೈತರು ಮತ್ತು ಇತರೇ ರೈತರ ಜೊತೆಗೆ ಸಂವಾದ ನಡೆಸುವರು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತೋವಿವಿಯ ಕುಲಸಚಿವ ಡಾ. ಟಿ.ಬಿ.ಅಳ್ಳೊಳ್ಳಿ, ವಿಸ್ತರಣಾ ನಿರ್ದೇಶಕ ಡಾ. ಎಸ್. ಆಯ್. ಅಥಣಿ, ಸಹ ಸಂಶೋಧನಾ ನಿರ್ದೇಶಕ ಡಾ. ಕುಲಪತಿ ಹಿಪ್ಪರಗಿ ಇದ್ದರು.