ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್ ಹಂಚಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾ,ಮಿ ಮಾಡಿರುವ ಆರೋಪಕ್ಕೆ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಕೆಲವರು ಪ್ರಚಾರಕ್ಕೆ ಏನೇನೋ ಮಾಡ್ತಾ ಇರ್ತಾರೆ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ, ಹಾಗಾಗಿ ಅವರು ಆಸ್ಪತ್ರೆಗೆ ಹೋಗಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಕೇಳಿಕೊಳ್ತೀನಿ. ಅವರು ಕ್ಷೇಮವಾಗಿ ವಾಪಸ್ ಬರಲಿ, ಆಮೇಲೆ ಅವರ ಬಗ್ಗೆ ನಾನು ಮಾತನಾಡುತ್ತೇನೆ ಎಂದರು.
ಎಚ್ ಡಿ ಕುಮಾರಸ್ವಾಮಿ ಹೇಳಿಕೆಗಳಿಗೆ ಉತ್ತರ ಕೊಡೋ ಸ್ಥಿತಿಯಲ್ಲಿ ನಾನಿಲ್ಲ. ರಾಜ್ಯದ ಜನ ಎಚ್ ಡಿ ಕುಮಾರಸ್ವಾಮಿ ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೆವೇಗೌಡರು ಹೇಳಿರೋದನ್ನ ನೀವು ತೋರಿಸಿ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂತಾ ಹೇಳಿದ್ರಲ್ಲಾ, ಅದನ್ನ ನೀವು ತೋರಿಸಿ ಎಂದು ಸವಾಲು ಹಾಕಿದರು.
ನಾವು ಗ್ಯಾರಂಟಿ ಯೋಜನೆಗಳು ಹಾಗೂ ವಾಗ್ದಾನಗಳ ಮೇಲೆ ಚುನಾವಣೆಗೆ ಹೋಗ್ತಾ ಇದ್ದೀವಿ ಎಂದ ಅವರು ಇದೇ ಸಂದರ್ಭದಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿ, ಕೃಷ್ಣಗಿರಿಯಲ್ಲಿ ಬಾಂಬ್ ಸ್ಪೋಟ ತರಬೇತಿ ಪಡೆದಿದ್ದಾನೆ ಎಂದು ಎಂದು ಶೋಭಾ ಕರಂದ್ಲಾಜೆ ಆರೋಪ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಅವರದ್ದೇ ಇದೆ. ಬೇಹುಗಾರಿಕಾ ಸಂಸ್ಥೆಗಳು ಅವ್ರ ಕೈಯಲ್ಲೇ ಇದೆ. ಅವ್ರು ಕಂಟ್ರೋಲ್ ಮಾಡಬಹುದು ಅಲ್ವಾ. ಕೃಷ್ಣಗಿರಿಯಲ್ಲಿ ಮಾಡ್ತಾ ಇದ್ರೆ ಯಾಕೆ ಮುಚ್ಚಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ನಾವು ಯಾರ ಕುತ್ತಿಗೆಯನ್ನೂ ಕೊಯ್ದಿಲ್ಲ. ಅವ್ರನ್ನು ಸಿಎಂ, ಪಿಎಂ ಎಲ್ಲಾ ಮಾಡಿದ್ವಿ. ಕಾಂಗ್ರೆಸ್ ಅವ್ರನ್ನ ಪ್ರಧಾನ ಮಂತ್ರಿ ಮಾಡಿದ್ದಕ್ಕೆ ಎಲ್ಲಾರು ನೆನೆಸಿಕೊಳ್ತಿರೋದು. ನಾವು ಯಾರನ್ನೂ ಬಲಿಷ್ಠರೆಂದು ತಿಳಿದುಕೊಂಡಿಲ್ಲ ಎಂದರು.