ಮೈಸೂರು: ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿರುಗೇಟು ನೀಡಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಆಗಿದ್ದರೆ ತಾನೇ ಟ್ರೇಲರ್. ಅವರದ್ದು ಸುಳ್ಳಿನ ಪಿಕ್ಚರ್ ಬಾಕಿ ಇರಬಹುದು. ಬಿಜೆಪಿ 400 ಸೀಟ್ ಗೆಲ್ಲಬೇಕು ಎಂಬ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ ಬಿಜೆಪಿ 200 ಸೀಟ್ ಗೆಲ್ಲುವುದು ಅನುಮಾನವಿದೆ. ಬಿಜೆಪಿಯ ಸಮೀಕ್ಷೆಯಿಂದಲೇ ಈ ವಿಚಾರ ಬಹಿರಂಗವಾಗಿದೆ. ಹೀಗಾಗಿ ಅವರು 400 ಸೀಟ್ ಗೆಲ್ಲುತ್ತೇವೆಂದು ಬಿಂಬಿಸುತ್ತಿದ್ದಾರೆ ಎಂದರು.
ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಕೂಡ ಅವರ ತಂತ್ರಗಾರಿಕೆ. ಕರ್ನಾಟಕದಲ್ಲಿ ನನಗೆ ವಿಶ್ವಾಸ ಇದೆ. 18ರಿಂದ 20 ಸ್ಥಾನ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಗರ್ವ ಭಂಗವಾಗಬೇಕು ಎಂಬ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿ, ನನಗೆ ಗರ್ವ ಇದ್ದರೆ ತಾನೇ ಭಂಗ ಆಗುವುದು ಎಂದರು. ಸತ್ಯ ಹೇಳಿದ್ದಕ್ಕೆ ನನಗೆ ಗರ್ವ ಅಂತಾ ಹೇಳುತ್ತಿದ್ದಾರೆ. ಮೋದಿ ಪಿಎಂ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ಯಾರು? ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗುತ್ತೇನೆ ಎಂದವರು ಯಾರು? ಇದನ್ನು ನಾನು ಹೇಳಿದ್ದಕ್ಕೆ ಗರ್ವ ಎನ್ನುತ್ತಾರೆ, ನನಗೆ ಗರ್ವ ಇಲ್ಲ. ನಮ್ಮ ಸರ್ಕಾರದ ಜನಪರ ಆಡಳಿತ ನಮ್ಮ ಕೈ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಬಾರಿ ಬಿಜೆಪಿಯ ಸುಳ್ಳಿಗೆ ಯಾರು ಸಹ ಮರಳಾಗುವುದಿಲ್ಲ. ಮೋದಿಯೂ ಬಂದು ಪ್ರಚಾರ ಮಾಡಲಿ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ್ದರು. ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಮಾಡಲಿ ಬಿಡಿ ಎಂದು ಅವರು ಹೇಳಿದರು.