ಕಳೆದ 24 ವರ್ಷಗಳಿಂದ ಪ್ರತಿಪಕ್ಷಗಳ ಬೈಗುಳ ತಿಂದು‘ ಗಾಲಿ ಪ್ರೂಫ್ ಆಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಭಾರತದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ. ಸಂವಿಧಾನದ ಮಿತಿಗಳನ್ನು ಉಲ್ಲಂಘಿಸಲಾಗುತ್ತಿದೆ, ಇದೆಲ್ಲವೂ ವೋಟ್ ಬ್ಯಾಂಕ್ ರಾಜಕಾರಣ. ಮುಸ್ಲಿಮರಿಗೆ ಒಬಿಸಿ ಕೋಟಾ ಕುರಿತು ಕಲ್ಕತ್ತಾ ಹೈಕೋರ್ಟ್‌ನ ಆದೇಶ ಮತ್ತು ನಂತರದ ಮಮತಾ ಬ್ಯಾನರ್ಜಿಯವರ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿ, ಲೋಕಸಭಾ ಚುನಾವಣೆ 2024ರ ಕೊನೆಯ ಹಂತದ ಮತದಾನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಸಂದರ್ಶನವೊಂದರಲ್ಲಿ ಈ ಮಾತುಗಳನ್ನಾಡಿದ್ದಾರೆ.
ನ್ಯಾಯಾಲಯದ ತೀರ್ಪು ಬಂದಾಗ, ಇಷ್ಟು ದೊಡ್ಡ ವಂಚನೆ ನಡೆಯುತ್ತಿದೆ ಎಂದು ಸ್ಪಷ್ಟವಾಯಿತು. ಆದರೆ ಅದಕ್ಕಿಂತಲೂ ದುರದೃಷ್ಟಕರ ಸಂಗತಿ ಎಂದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈಗ ನ್ಯಾಯಾಂಗವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮೋದಿ, ತಾನು 24 ವರ್ಷಗಳಿಂದ ಪ್ರತಿಪಕ್ಷಗಳ ನಿಂದನೆಗೆ ಒಳಗಾಗುತ್ತಲೇ ಬಂದಿದ್ದೇನೆ ಹೀಗಾಗಿ ನನಗೆ ಈಗ ಯಾವ ಬೈಗುಳವೂ ನಾಟುವುದಿಲ್ಲ ಎಂದಿದ್ದಾರೆ. ನಾನು ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಹಿಂದುಳಿದ ವರ್ಗದವರನ್ನು ಎಚ್ಚರಿಸಬೇಕಿದೆ ಏಕೆಂದರೆ ಈ ಜನರು ಇವರನ್ನು ಕತ್ತಲೆಯಲ್ಲಿಟ್ಟು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದರು.