ರಾಮನಗರ: ಡಿಕೆ ಸುರೇಶ್ ಪರ ಪ್ರಚಾರ ಮಾಡುತ್ತಾ ತಮ್ಮ ಚುನಾವಣಾ ವಾಹನದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್ ಬಿಜೆಪಿ-ಜೆಡಿಎಸ್ ಮೈತ್ರಿ ಮೇಲೆ ವಾಗ್ದಾಳಿ ನಡೆಸಿದರು.
ತನಗೆ ಜನರ ನಾಡಿ ಮಿಡಿತ ಚೆನ್ನಾಗಿ ಅರ್ಥ ಆಗುತ್ತೆ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುತ್ತದೆ ಯಾರ ಜೊತೆಯೂ ಮೈತ್ರಿಗೆ ಕೈ ಚಾಚದೆ ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ ಅಂತ ಹೇಳಿದ್ದೆ, ನಮಗೆ 136 ಸೀಟು ಬರಲಿಲ್ಲವೇ ಎಂದು ಶಿವಕುಮಾರ ಕೇಳಿದರು.
ದೇವೇಗೌಡ ಕುಟುಂಬದ ಜೊತೆ ತನಗೆ ಯಾವುದೇ ವೈರತ್ವ ಇಲ್ಲ, ಹಗೆತನ ಇದ್ದಿದ್ರೆ ಕುಮಾರಸ್ವಾಮಿಯನ್ನು ಕರೆದೊಯ್ದು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದರೆ ಡಾ ಸಿಎನ್ ಮಂಜುನಾಥ್ ಕೇಂದ್ರದಲ್ಲಿ ಆರೋಗ್ಯ ಸಚಿವರಾಗುತ್ತಾರಂತೆ ಅಂತ ಹೇಳಿದಾಗ ಶಿವಕುಮಾರ್, ಅಯ್ಯೋ ಅಲ್ಲೊಬ್ಬರು ಕೃಷಿ ಸಚಿವರಾಗುತ್ತಿದ್ದಾರೆ, ಇಲ್ಲೊಬ್ಬರು ಅರೋಗ್ಯ ಮಂತ್ರಿ! ಅಸಲಿಗೆ ಇವರು ಗೆದ್ದರೆ ತಾನೆ ಮಿನಿಸ್ಟ್ರುಗಳಾಗೋದು ಎಂದು ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿಗೆ ತನ್ನ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಬೇಕಾಗಿತ್ತು ಮತ್ತು ಪಕ್ಷದ ಅಸ್ತಿತ್ವವನ್ನು ಸಹ ಉಳಿಸಬೇಕಿತ್ತು ಹಾಗಾಗೇ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದ ಶಿವಕುಮಾರ್, ನೋಡ್ತಾ ಇರಿ ರಾಜ್ಯದಲ್ಲಿ ಬಿಜೆಪಿಯನ್ನು ಜೆಡಿಎಸ್ ಮುಗಿಸುತ್ತದೆ ಮತ್ತು ಜೆಡಿಎಸ್ ಅನ್ನು ಬಿಜೆಪಿ ನುಂಗಿಬಿಡಲಿದೆ ಎಂದರು.