ಬೆಂಗಳೂರು: ‘ನಾನು ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದೇನೆ. ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ. ನಾನು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ. ಹೋಗುವುದೂ ಇಲ್ಲ, ಅದರ ಅಗತ್ಯವೂ ನಮಗಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಅಂಬರೀಷ್ ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದರು? ಡಿ.ಕೆ. ಶಿವಕುಮಾರ್ ಅವರು ಹೀಗೇಕೆ ಮಾತನಾಡುತ್ತಿದ್ದಾರೆ ಎಂಬ ಸುಮಲತಾ ಅವರ ಹೇಳಿಕೆಗೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಷ್ ಅವರಿಗೆ ಕಾಂಗ್ರೆಸ್ ಏನು ಮಾಡಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದೂ ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ನಾನು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ. ಅವರ ವಿಚಾರಕ್ಕೆ ಇಂದು ಹೋಗಿಲ್ಲ, ನಾಳೆಯೂ ಹೋಗಲ್ಲ. ಅವರ ಸುದ್ದಿಯೂ ನನಗೆ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಮೋದಿ ಅಲೆಯೂ ಇಲ್ಲ. ಬಿಜೆಪಿ ಅಲೆಯೂ ಇಲ್ಲ. ಇರುವುದು ಒಂದೇ ಅಲೆ ಅದು ಗ್ಯಾರಂಟಿ ಅಲೆ. ನಾನು ಮತ್ತು ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್‌ಗೆ ಸಹಿ ಹಾಕಿ ಅನುಷ್ಠಾನಕ್ಕೆ ತಂದಿದ್ದು, ಕಾಂಗ್ರೆಸ್‌ಗೆ ಜನರು ನೀಡಿದ ಸಹಕಾರದಿಂದ 136 ಸ್ಥಾನಗಳನ್ನು ಗೆದ್ದು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಜನರ ಕಲ್ಯಾಣಕ್ಕಾಗಿ 52 ಸಾವಿರ ಕೋಟಿ ರು. ಖರ್ಚು ಮಾಡಿದ್ದೇವೆ. ದೇಶದ ಯಾವ ರಾಜ್ಯಗಳು ಮಾಡದ ಕೆಲಸವನ್ನು ಕರ್ನಾಟಕ ಕಾಂಗ್ರೆಸ್ ಮಾಡಿದೆ ಎಂದರು.