ಬೆಂಗಳೂರು: ನನ್ನ ಮನೆಯ ಚಿಂತೆ ನಿಮಗ್ಯಾಕೆ, ಮೊದಲು ನಿಮ್ಮ ಮನೆಯನ್ನು ಸರಿಯಾಗಿ ನೋಡಿಕೊಳ್ಳಿ. ನನ್ನ ಮನೆಯನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ”ಎಂದು ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಹೇಳಿದರು.
ಬಿಜೆಪಿಯ ಇಬ್ಬರೋ ಮೂವರು, ಜೆಡಿಎಸ್ಸಿನ ಐದಾರು ಶಾಸಕರು ಅಡ್ಡ ಮತದಾನ ಮಾಡಬಹುದು ಎನ್ನುವ ಮಾತನ್ನೂ ಕಳೆದ ವಾರ ಡಿಕೆಶಿ ಆಡಿದ್ದರು.
ರಾಜ್ಯದಿಂದ ತೆರವಾಗುತ್ತಿರುವ ನಾಲ್ಕು ರಾಜ್ಯ ಸಭಾ ಸ್ಥಾನಗಳಿಗೆ ನಾಮಪತ್ರ ಹಿಂದಕ್ಕೆ ಪಡೆಯಲು ಇಂದು ಕೊನೆಯ ದಿನವಿದ್ದು, ಐದನೇ ಅಭ್ಯರ್ಥಿಯಾಗಿ ಕಣದಲ್ಲಿರುವ ಜೆಡಿಎಸ್ಸಿನ ಕುಪೇಂದ್ರ ರೆಡ್ಡಿಯವರು ನಾಮಪತ್ರ ಹಿಂದಕ್ಕೆ ಪಡೆಯುವ ಸಾಧ್ಯತೆ ತೀರಾ ಕಮ್ಮಿಯಾಗಿರುವುದರಿಂದ ರಾಜ್ಯಸಭಾ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಫೆಬ್ರವರಿ 27ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ ಐದು ಗಂಟೆಗೆ ಮತಎಣಿಕೆ ನಡೆಯಲಿದೆ. ಈಗಿರುವ ಪಕ್ಷಗಳ ಬಲಾಬಲದ ಆಧಾರದ ಮೇಲೆ ಹೇಳುವುದಾದರೆ ಕಾಂಗ್ರೆಸ್ಸಿನ ಮೂವರು ಮತ್ತು ಬಿಜೆಪಿಯ ಒಬ್ಬರು ನಿರಾಯಾಸವಾಗಿ ಗೆಲುವನ್ನು ಸಾಧಿಸಬಹುದು.
ಸದ್ಯದ ಮಟ್ಟಿಗೆ ಅದು ಅಷ್ಟು ಸುಲಭವಲ್ಲ ಎನ್ನುವ ಚಿತ್ರಣವಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮತ್ತು ಕೆಪಿಸಿಸಿ ಅಧ್ಯಕ್ಷರು ಆತ್ಮಸಾಕ್ಶಿಯ ಮತಗಳ ಬಗ್ಗೆ ಮಾತನಾಡಿರುವುದರಿಂದ ಅಡ್ಡಮತದಾನದ ಸಾಧ್ಯತೆ ಇಲ್ಲದಿಲ್ಲ. ಈ ನಡುವೆ ಬಿಜೆಪಿಯ ಇನ್ನೋರ್ವ ಶಾಸಕರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅಡ್ಡ ಮತದಾನ ನಡೆದರೆ ಮಾತ್ರ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಸಾಧ್ಯ, ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯ ಶಾಸಕರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿರುವುದರಿಂದ ಕುಪೇಂದ್ರ ರೆಡ್ಡಿಗೆ ಗೆಲುವು ಸುಲಭವಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ, ಜೊತೆಗೆ, ಡಿಕೆಶಿ ತಮ್ಮ ಮೂರೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ.