Steven Finn Announces Retirement:
ಸ್ಟಾರ್ ವೇಗದ ಬೌಲರ್ ಇದ್ದಕ್ಕಿದ್ದಂತೆ ಎಲ್ಲಾ ಮಾದರಿಯ ಕ್ರಿಕೆಟ್’ನಿಂದ ನಿವೃತ್ತಿ ಘೋಷಿಸಿದ್ದಾರೆ. 18 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪೋಸ್ಟ್ ಶೇರ್ ಮಾಡುವ ಮೂಲಕ ಹೇಳಿದ್ದಾರೆ.
ಇಂಗ್ಲೆಂಡ್ ವೇಗದ ಬೌಲರ್ ಸ್ಟೀವನ್ ಫಿನ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಮೂರು ಬಾರಿ ಆಶಸ್ ಸರಣಿ ವಿಜೇತ ಸ್ಟೀವನ್ ಫಿನ್ ಅವರು ಬಹು ಗಾಯಗಳಿಂದಾಗಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ ಎಂದು ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ. ನಿವೃತ್ತಿ ಘೋಷಿಸಿದ ಸ್ಟೀವನ್ ಫಿನ್, “ಇಂದು ನಾನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್’ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ 12 ತಿಂಗಳಿಂದ ನಾನು ನನ್ನ ದೇಹದೊಂದಿಗೆ ಹೋರಾಡುತ್ತಿದ್ದೇನೆ. ಇದೀಗ ಸೋತಿದ್ದೇನೆ” ಎನ್ನುತ್ತಾ ಭಾವುಕರಾಗಿ ಹೇಳಿಕೆ ನೀಡಿದ್ದಾರೆ.
“2005 ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ದಿನವನ್ನು ಎಂದಿಗೂ ಮರೆಯಲಾರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಈ ಪ್ರಯಾಣವು ಸುಲಭವಾಗಿರಲಿಲ್ಲ. ಆದರೆ ನಾನು ಈ ಪ್ರಯಾಣವನ್ನು ಪ್ರೀತಿಸುತ್ತೇನೆ. ಇಂಗ್ಲೆಂಡ್ ಪರ 36 ಟೆಸ್ಟ್ ಸೇರಿದಂತೆ 125 ಪಂದ್ಯಗಳನ್ನು ಆಡಿರುವುದು ನನ್ನ ಕನಸುಗಳ ಎಲ್ಲೆಯನ್ನು ಮೀರಿದೆ. ಕಳೆದ 12 ತಿಂಗಳುಗಳಲ್ಲಿ ಸಸೆಕ್ಸ್ ಕ್ರಿಕೆಟ್ ನೀಡಿದ ಬೆಂಬಲಕ್ಕಾಗಿ ಮತ್ತು ಕಳೆದ ಋತುವಿನ ಆರಂಭದಲ್ಲಿ ಕ್ಲಬ್’ನಲ್ಲಿ ನನಗೆ ದೊರೆತ ಆತ್ಮೀಯ ಸ್ವಾಗತಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದಿದ್ದಾರೆ.
ಸ್ಟೀವನ್ ಫಿನ್ ಅಂತರರಾಷ್ಟ್ರೀಯ ವೃತ್ತಿಜೀವನ:
34 ವರ್ಷದ ಸ್ಟೀವನ್ ಫಿನ್ 2010ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ಪರ 36 ಟೆಸ್ಟ್, 69 ODI ಮತ್ತು 21 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 66 ಇನ್ನಿಂಗ್ಸ್’ಗಳಲ್ಲಿ ಬೌಲಿಂಗ್ ಮಾಡಿದ್ದು, 30.41 ಸರಾಸರಿಯಲ್ಲಿ 125 ವಿಕೆಟ್’ಗಳನ್ನು ಪಡೆದಿದ್ದಾರೆ. 69 ಏಕದಿನ ಪಂದ್ಯಗಳಲ್ಲಿ 102 ವಿಕೆಟ್ ಪಡೆದಿದ್ದಾರೆ. ಇನ್ನು 21 T20I ಪಂದ್ಯಗಳಲ್ಲಿ 27 ವಿಕೆಟ್’ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.