ಬಾಗಲಕೋಟೆ
ಪೊಲೀಸರು ಎಲ್ಲೇ ಹೋದರೂ ಗೌರವ ದೊರೆಯುತ್ತಿದ್ದು ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು ಎಂದು ಬೆಂಗಳೂರು ಆಂತರಿಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸರ ಪರೇಡ್ ವೀಕ್ಷಿಸಿದ ನಂತರ ಮಾತನಾಡಿದ ಅವರು, ನಮ್ಮ ಭಾರತದಲ್ಲಿ ಯಾವುದೇ ಧರ್ಮ, ಭಾಷೆ, ಏನೆ ಇದ್ದರೂ ಕೃತಜ್ಞತೆಗೆ ಹೆಚ್ಚಿನ ಮಹತ್ವವಿದೆ. ಇತಿಹಾಸದ ಪುಟ ತೆರೆದು ನೋಡಿದಾಗ ಕೃತಜ್ಞತೆ ಸಲ್ಲಿಸಿದವರನ್ನು ಹೊಗಳಿದ್ದಾರೆ. ಜತೆಗೆ ಉತ್ತಮ ನಡೆತೆಯುಳ್ಳ ಮಹಾಭಾರತದ ಕರ್ಣನನ್ನು ಜನ ಹೊಗಳಿದ್ದಾರೆ. ಇಲ್ಲಿ ಯಾರು ಗೆಲ್ಲುತ್ತಾರೋ ಅವರನ್ನು ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದರು.
ನಮಗೆ ವೃತ್ತಿಯಿಂದ ಊಟ, ತಿಂಡಿ, ವೇತನ ಬರುವುದು ಸಹಜ. ನಮ್ಮ ವೃತ್ತಿಗೆ ಎಷ್ಟು ಗೌರವವಿದೆ ಎಂದರೆ ದೇಶದ ಯಾವುದೇ ಭಾಗಕ್ಕೂ ತೆರಳಿದರೂ ಜನ ಗೌರವಿಸುತ್ತಾರೆ. ಅದರ ಕೃತಜ್ಞತೆ ನಮ್ಮಲ್ಲಿರಬೇಕು. ನನ್ನ ಹಲವು ಸ್ನೇಹಿತರು ಹಲವು ಕಂಪನಿಗಳ ಸಿಇಒ ಸೇರಿದಂತೆ ಉನ್ನತ ಹುದ್ದೆಯಲ್ಲಿದ್ದರೂ ನಾನು ಪೊಲೀಸ್ ಅಧಿಕಾರಿ ಎಂಬ ಗೌರವ ಇಟ್ಟುಕೊಂಡು ಕೃತಜ್ಞತೆ ಸಲ್ಲಿಸುತ್ತಾರೆ. ಪೊಲೀಸ್ ಅಧಿಕಾರಿಗಳಿಗೆ ದೊರೆಯುವ ಗೌರವ ದೊಡ್ಡದು. ಅದಕ್ಕೆ ನಾವು ಕೃತಜ್ಞತೆ ತೋರಿಸಬೇಕು ಎಂದು ಕಿವಿ ಮಾತು ಹೇಳಿದರು.
ಠಾಣೆಗೆ ಸಹಾಯ ಕೇಳಿ ಬರುವವರನ್ನು ಉತ್ತಮವಾಗಿ ನಡೆಸಿಕೊಳ್ಳಿ. ಇದು ನಮ್ಮ ಡ್ಯೂಟಿ ಕೃತಜ್ಞತೆ ತೋರಿಸುತ್ತದೆ. ಅದು ನಿಮಗೂ, ನಿಮ್ಮ ಕುಟುಂಬಕ್ಕೂ ಹಾಗೂ ಇಲಾಖೆಗೂ ಉತ್ತಮ ಹೆಸರು ತಂದು ಕೊಡುತ್ತದೆ. ನಿಮ್ಮಿಂದ ಇಲಾಖೆ ಬಯಸುವುದು ಇದನ್ನೇ. ಎಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು ಅಷ್ಟು ಉತ್ತಮವಾಗಿ ನಿರ್ವಹಿಸಿ. ಯಾಕಪ್ಪಾ ಈ ಕೆಲಸಕ್ಕೆ ಬಂದಿದ್ದೀನಿ? ಯಾಕೆ ಕೆಲಸ ಮಾಡಬೇಕು ಎಂಬ ತಾತ್ಸಾರ ಭಾವನೆ ಬೇಡ. ಇಲಾಖೆಯಲ್ಲಿ ಐಜಿ, ಎಸ್‌ಪಿ ಅವರೇ ಉತ್ತಮ ಕೆಲಸ ಮಾಡಬೇಕೆಂದಿಲ್ಲ. ಒಬ್ಬ ಪೇದೆಯೂ ಉತ್ತಮ ಕೆಲಸದ ಮೂಲಕ ಗುರುತಿಸಿಕೊಂಡ ನಿದರ್ಶನಗಳಿವೆ. ಪೊಲೀಸರಿಗೆ ರ‍್ಯಾಂಕ್ ಮುಖ್ಯವಲ್ಲ, ಕೆಲಸ ಮುಖ್ಯವಾಗಿದ್ದು ಅದರಿಂದ ನಿಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿ. ಹಾಗಾದಾಗ ಎಂತಹುದೆ ದೊಡ್ಡ ಸಮಸ್ಯೆ ಬಂದರೂ ಪರಿಹರಿಸಬಹುದು.
ಪರೇಡ್‌ಗೆ ಶಹಬ್ಬಾಷ್
ಜಿಲ್ಲಾ ಪೊಲೀಸ್ ಪರೇಡ್ ವೀಕ್ಷಿಸಿದ ಆಂತರಿಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಚದ್ರಶೇಖರ ಇಲ್ಲಿನ ಪರೇಡ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿನ ಎಸ್‌ಪಿ, ಡಿಆರ್ ಡಿಎಸ್‌ಪಿ, ಎಎಸ್‌ಪಿ ಉತ್ತಮವಾಗಿ ಸಂಘಟನೆ ಮಾಡಿದ್ದೀರಿ. ಬೆಳಗಾವಿಯಲ್ಲೂ ಪರೇಡ್ ವೀಕ್ಷಿಸಿದ್ದೇನೆ. ಇಲ್ಲೂ ನೋಡಿದ್ದು ಮುಂದಿನ ಹಂತದಲ್ಲೂ ಬೇರೆ ಜಿಲ್ಲೆಯಲ್ಲೂ ಉತ್ತಮ ಪರೇಡ್ ನಿರೀಕ್ಷೆಯಿದೆ. ಇದರ ಕ್ರೆಡಿಟ್ ಉತ್ತರ ವಲಯದ ಐಜಿಪಿ ಅವರಿಗೆ ಸಲ್ಲಬೇಕು. ಬಾಗಲಕೋಟೆ ಜಿಲ್ಲೆಯನ್ನು ಮರೆಯುವುದಿಲ್ಲ ಎಂದು ಇಲ್ಲಿನ ಪೊಲೀಸ್‌ರ ಕಾರ್ಯ ವೈಖರಿ ಕುರಿತು ಮೆಚ್ಚುಗೆ ಸಲ್ಲಿಸಿದರು.
ಕುಟುಂಬಕ್ಕೂ ಆದ್ಯತೆ ನೀಡಿ
ಪೊಲೀಸ್ ಕೆಲಸ ಎಂದಾಕ್ಷಣ ಹಲವು ಒತ್ತಡ ಸಹಜ. ಆದರೆ ಇಂತಹ ಒತ್ತಡದ ಮಧ್ಯೆಯೂ ಕುಟುಂಬಕ್ಕೂ ಸಮಯ ಮೀಸಲಿಡಿ. ಠಾಣೆಯಲ್ಲಿ ಎಷ್ಟೆ ಒತ್ತಡಗಳಿದ್ದರೂ ಮನೆಗೆ ತೆರಳಿದಾಕ್ಷಣ ಅವುಗಳನ್ನೆಲ್ಲ ಕೊಂಚ ಬದಿಗೊತ್ತಿ. ಮಕ್ಕಳೊಂದಿಗೆ ಬೆರೆಯಿರಿ, ಸಂತಸದಿಂದಿರಿ ಎಂದು ಆಂತರಿಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ ಕಿವಿ ಮಾತು ಹೇಳಿದರು.