ನವದೆಹಲಿ: ತೆಲಂಗಾಣದ ಭೋಂಗಿರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಧಿಕಾರಕ್ಕೆ ಬಂದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಹೆಚ್ಚಿಸಲಾಗುವುದು ಮತ್ತು ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸಲಾಗುವುದು ಎಂದು ಘೋಷಿಸಿದರು.
ಈ ವೇಳೆ ವಾಗ್ದಾಳಿ ನಡೆಸಿದ ಅಮಿತ್ ಶಾ, “ಕಾಂಗ್ರೆಸ್ ಸುಳ್ಳು ಹೇಳುವ ಮೂಲಕ ಚುನಾವಣೆ ಎದುರಿಸಲು ಬಯಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಮುಗಿಸುವುದಾಗಿ ಕಾಂಗ್ರೆಸ್ ಹೇಳಿದೆ. ಪ್ರಧಾನಿ ಮೋದಿಯವರು ಕಳೆದ 10 ವರ್ಷಗಳಿಂದ ಈ ದೇಶವನ್ನು ಒಮ್ಮತದಿಂದ ಮುನ್ನಡೆಸುತ್ತಿದ್ದಾರೆ.
“2019ರಲ್ಲಿ ತೆಲಂಗಾಣದ ಸಾರ್ವಜನಿಕರು ನಮಗೆ ನಾಲ್ಕು ಸ್ಥಾನಗಳನ್ನು ನೀಡಿದ್ದಾರೆ. ಈ ಬಾರಿ ನಾವು ತೆಲಂಗಾಣದಲ್ಲಿ 10ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ತೆಲಂಗಾಣದಲ್ಲಿ ಈ ಎರಡಂಕಿಯ ಅಂಕವು ಪ್ರಧಾನಿ ಮೋದಿಯನ್ನು 400 ಸ್ಥಾನಗಳನ್ನು ದಾಟುವಂತೆ ಮಾಡುತ್ತದೆ ಎಂಬ ವಿಶ್ವಾಸವಗಿದೆ.
10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತೇವೆ. ನಾವು ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಹೆಚ್ಚಿಸುತ್ತೇವೆ.” ಎಂದು ಅಮಿತ್ ಶಾ ಹೇಳಿದ್ದಾರೆ.
ಅವರು ಮೀಸಲಾತಿಯನ್ನು ಕೊನೆಗೊಳಿಸಲಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಮೂಲಕ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ದೋಚಿದೆ.” ಎಂದಿದ್ದಾರೆ.
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಕಾಂಗ್ರೆಸ್ ಕೊಳ್ಳೆ ಹೊಡೆದಿದ್ದು, ಆ ಮೀಸಲಾತಿಯನ್ನು ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದೆ ಎಂದು ಆರೋಪಿಸಿದರು.