ಹುಬ್ಬಳ್ಳಿ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದರು.
ಹುಬ್ಬಳ್ಳಿಯಲ್ಲಿ ಮೇ 1ರಂದು ನಡೆದ ಬಿಜೆಪಿ ಬಹಿರಂಗ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದರು. ಅವರು ಭಾಷಣ ಮುಗಿಸಿ ತೆರಳಿದ ನಂತರ, ತಮ್ಮ ಭಾಷಣ ಆರಂಭಿಸಿದ ಶಾಸಕ ಬಸನಗೌಡ ಪಾಟೀಲ್ ಹೀಗೆ ತಿಳಿಸಿದರು.
ಈ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಬಂದರೆ ಉತ್ತರ ಕರ್ನಾಟಕದವರೊಬ್ಬರು ಸಿಎಂ ಆಗುತ್ತಾರೆ ಎಂದು ಯತ್ನಾಳ್ ಮತ್ತೊಂದು ಭವಿಷ್ಯ ನುಡಿದರು.
ಮುಂದೆ ನಮ್ಮದೇ ಸರ್ಕಾರ ಬಂದಾಗ ಉತ್ತರ ಕರ್ನಾಟಕದರೇ ಸಿಎಂ ಆಗುತ್ತಾರೆ. ಅಷ್ಟೇ ಅಲ್ಲ, ಯಾರು ಏನೇ ಲಾಗ ಹೊಡೆದರೂ ಇಡೀ ದೇಶದಲ್ಲಿ ಮುಸ್ಲಿಂ ಮೀಸಲಾತಿ ರದ್ದಾಗುತ್ತದೆ. ಹಾಗೆಂದು ಅಮಿತ್ ಶಾ ಅವರೇ ಹೇಳಿದ್ದು, ಹಾಗಿರುವಾಗ ಅದು ಇಡೀ ದೇಶಾದ್ಯಂತ ಜಾರಿಯಾಗುತ್ತದೆ ಎಂದು ಹೇಳಿದರು.
ಎಸ್‌ಸಿ, ಎಸ್‌ಟಿ, ಲಿಂಗಾಯಿತರಿಗೆ ಮೀಸಲಾತಿ ಹಂಚಿಕೊಡುತ್ತೇವೆ ಅಂತ ಹೇಳಿದ್ದು, ಅವರಿಗೆ ಇರುವ ಮೀಸಲಾತಿಯನ್ನು ರದ್ದುಗೊಳಿಸಿ, ಆ ಮೀಸಲಾಯಿತಿಯನ್ನು ಎಸ್ಸಿ, ಎಸ್ಟಿಗಳಿಗೆ ಹಂಚುತ್ತೇವೆ ಎಂದು ಯತ್ನಾಳ್ ಭರವಸೆ ನೀಡಿದರು.
ಧಾರವಾಡದಲ್ಲಿ ನಾನು ಲಿಂಗಾಯತ, ಲಿಂಗಾಯತ ಅಂತ ಹೇಳುತ್ತಿದ್ದವರು ಈಗ ಮನೆಗೆ ಹೋಗಿದ್ದಾರೆ. ಒಬ್ಬ ನಾಮಪತ್ರ ಹಿಂದೆ ತೆಗೆದುಕೊಂಡಿದ್ದು, ಜೋಶಿಯವರನ್ನು ಆಶೀರ್ವಾದ ಮಾಡುತ್ತೇನೆ ಬನ್ನಿ ಅಂತ ಕರೆಯುತ್ತಿದ್ದಾನೆ ಎಂದು ಹೇಳುವ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಹೆಸರು ಪ್ರಸ್ತಾಪಿಸದೇ ಯತ್ನಾಳ್ ವಾಗ್ದಾಳಿ ನಡೆಸಿದರು.
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಡಿ.ಕೆ. ಶಿವಕುಮಾರ್ ಆ್ಯಂಡ್ ಕಂಪನಿ ಪ್ರಯತ್ನಿಸುತ್ತಿದೆ. ಆದರೆ, ಈ ಪ್ರಯತ್ನದ ಜೊತೆಗೆ ಈ ಸರ್ಕಾರ ಬೀಳುತ್ತೆ, ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ಆಗುತ್ತೆ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಬುಲ್ಡೋಜರ್ ಬಾಬಾ ಥರದವರು ನಮ್ಮ ಕರ್ನಾಟಕದಲ್ಲಿ ಸಿಎಂ ಆಗುತ್ತಾರೆ ಎಂದು ತಿಳಿಸಿದರು.