ಭಾರತದ ಷೇರು ಮಾರುಕಟ್ಟೆ ಅದ್ವಿತೀಯ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಬಹಳಷ್ಟು ಹೊಸಬರು ಷೇರುಪೇಟೆಗೆ ಪದಾರ್ಪಣೆ ಮಾಡುತ್ತಿದ್ದು, ಅದಕ್ಕೆ ಸಾಕ್ಷಿ ಹೊಸ ಡೀಮ್ಯಾಟ್ ಖಾತೆಗಳ ಸಂಖ್ಯೆಯಲ್ಲಿ ಏರಿಕೆ ಆಗಿರುವುದು. ಷೇರು ವ್ಯವಹಾರದಿಂದ ಸಖತ್ ಲಾಭ ಗಳಿಸುವುದು ನೀವು ಭಾವಿಸಿದಷ್ಟು ಸುಲಭವೂ ಅಲ್ಲ, ಕಷ್ಟವೂ ಅಲ್ಲ.
ಡೀಮ್ಯಾಟ್ ಅಕೌಂಟ್ ತೆರೆದ ಮೇಲೆ ನೀವು ಷೇರು ಖರೀದಿಸುವ ಮುನ್ನ ಕೆಲ ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದು, ನೀವು ಷೇರುಗಳಲ್ಲಿ ಹೂಡಿಕೆಗೆಂದು ಲಂಪ್ಸಮ್ ಹಣ ಎಷ್ಟು ಇಟ್ಟಿದ್ದೀರಿ ಎಂಬುದು.
ದೀರ್ಘಾವಧಿ ಹೂಡಿಕೆ ಮಾಡಬಯಸುತ್ತೀರಾ, ಅಥವಾ ಅಲ್ಪಾವಧಿಗೆ ಲಾಭ ಪಡೆಯಲು ಆಲೋಚಿಸುತ್ತಿರುವಿರಾ ಎಂಬುದು ಎರಡನೆಯದು. ಹಾಗೆಯೇ, ಷೇರು ಖರೀದಿಸಿದಾಗ ಮತ್ತು ಮಾರಿದಾಗ ವಿವಿಧ ಶುಲ್ಕಗಳಿಗೆ ಎಷ್ಟು ಹಣ ಕಡಿತಗೊಳ್ಳುತ್ತದೆ ಎಂಬುದೂ ಗೊತ್ತು ಮಾಡಿಕೊಂಡಿರಬೇಕು.
ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಕಂಪನಿಗಳ ಷೇರುಗಳ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಯುತ್ತದೆ. ಈ ರೀತಿಯ ಷೇರು ಖರೀದಿ, ಮಾರಾಟ ಮಾಡುವುದಕ್ಕೆ ಷೇರ್ ಟ್ರೇಡಿಂಗ್ ಎನ್ನುವುದು. ಇದಕ್ಕೆ ಯಾವುದಾದರೋ ಬ್ರೋಕರ್ ಕಂಪನಿಗಳಲ್ಲಿ ಡೀಮ್ಯಾಟ್ ಅಕೌಂಟ್ ತೆರೆಯುತ್ತೀರಿ.
ಎಸ್ಬಿಐ ಸೆಕ್ಯೂರಿಟೀಸ್, ಎಚ್ಡಿಎಫ್ಸಿ ಇತ್ಯಾದಿ ಹಲವು ಸಂಸ್ಥೆಗಳು ಬ್ರೋಕರ್ಗಳಾಗಿರುತ್ತವೆ. ಇವನ್ನು ಡೆಪಾಸಿಟರಿ ರೆಪೋಸಿಟರೀಸ್ ಎನ್ನುತ್ತಾರೆ. ಝೀರೋಧ ಕೈಟ್, ಪೇಟಿಎಂ ಮನಿ, ಗ್ರೋ ಇತ್ಯಾದಿ ಆ್ಯಪ್ ಆಧಾರಿತ ಡಿಸ್ಕೌಂಟ್ ಬ್ರೋಕರ್ಗಳಲ್ಲೂ ಡೀಮ್ಯಾಟ್ ಅಕೌಂಟ್ ತೆರೆಯಬಹುದು.