ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿಕೊಂಡು ಮತ ಹಾಕುವುದಾದರೆ, ನೀವು ಮೋದಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ್ಮ ಸಹೋದರ ಡಿಕೆ ಸುರೇಶ್ ಪರ ಪ್ರಚಾರ ನಡೆಸಿದ ಅವರು ಮತದಾರರಿಗೆ ಈ ಮೂಲಕ ಎಚ್ಚರಿಕೆಯನ್ನು ನೀಡಿದರು.
ಭಾನುವಾರ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಯಶವಂತಪುರದ ಆರ್‌ಎಸ್‌ಎಸ್ ಶಾಂತಿ ನಿವಾಸ ಅಪಾರ್ಟ್‌ಮೆಂಟ್, ಯಶವಂತಪುರದ ಗೋಲ್ಡನ್ ಗ್ರಾಂಡ್ ಅಪಾರ್ಟ್ ಮೆಂಟ್ ಸೇರಿ ವಿವಿಧೆಡೆ ಸಹೋದರ ಡಿಕೆ ಸುರೇಶ್ ಪರ ಪ್ರಚಾರ ನಡೆಸಿದ ಡಿಕೆ ಶಿವಕುಮಾರ್ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳಿದರು.
ನಮ್ಮ ಮೇಲೆ ವಿಶ್ವಾಸ ಇಟ್ಟು ನಮ್ಮ ಪರ ನಿಂತರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಅವರನ್ನು ನಂಬಿಕೊಂಡರೆ ಏನೂ ಆಗುವುದಿಲ್ಲ, ನಿಮಗೆ ನೀರು ಕೊಟ್ಟು, ರಸ್ತೆ ಹಾಗೂ ಇತರೆ ಸಮಸ್ಯೆಯನ್ನು ನಾವು ಬಗೆಹರಿಸುತ್ತೆವೆಯೇ ಹೊರತು, ದಿಲ್ಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳ ಮತ ಸೆಳೆಯಲು ಮುಂದಾದರು.ಕುಡಿಯುವ ನೀರು, ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ನಿವಾಸಿಗಳು ಗಮನ ಸೆಳೆದಿದ್ದಾರೆ ಎಂದರು.
ನಾನು ಮೇಕೆದಾಟು ಪಾದಯಾತ್ರೆ ಕೈಗೊಂಡಾಗ ಕಬಾಬ್ ತಿನ್ನೋಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಈಗ ಪಾದಯಾತ್ರೆ ಬಗ್ಗೆ ಮಾತಾಡುತ್ತಿದ್ದಾರೆ. ಮಂಡ್ಯಕ್ಕೆ ಬಂದ ನಂತರ ಅವರಿಗೆ ಬಿಸಿ ತಟ್ಟಿರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.ರಸ್ತೆ ಮಾಡುವ ಉದ್ದೇಶಕ್ಕೆ ಇಲ್ಲಿರುವ ದೇವಾಲಯ ಸ್ಥಳಾಂತರ ಮಾಡಲು ಬಹಳ ಒತ್ತಡವಿದೆ. ಈ ಹಿಂದಿನ ಶಾಸಕರು ಹಾಗೂ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಒಪ್ಪಿದ್ದಾರೆ. ಗಣೇಶನನ್ನು ಸ್ಥಳಾಂತರ ಮಾಡಿ ಶಾಪ ಪಡೆಯಲು ತಯಾರಿಲ್ಲ. ದೇವಸ್ಥಾನ ಸ್ಥಳಾಂತರ ವಿಚಾರದಲ್ಲಿ ನಾನು ಕೈ ಹಾಕುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಮೇ ಅಂತ್ಯದ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಬಳಿಕ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೆ, ಈ ಭಾಗದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.