ಕಾರವಾರ: ಬಿಜೆಪಿ ನಾಯಕ, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದೀಗ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಟಿಕೆಟ್ ಸಿಗುವ ವಿಶ್ವಾಸದಲ್ಲಿ ಚುನಾವಣೆ ಆರಂಭಕ್ಕೂ ಮುನ್ನ ರಾಮನ ಹೆಸರಿನಲ್ಲಿ ಪ್ರಚಾರ ಆರಂಭಿಸಿರುವ ಕಾಗೇರಿ, ಬಿಜೆಪಿಗೆ ನೀವು ಮತ ಹಾಕಿದರೆ ಅದು ರಾಮನಿಗೆ ಹಾಗೂ ಪ್ರಧಾನಿ ಮೋದಿಗೆ ಮತ ಹಾಕಿದಂತೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಕಾರ್ಯರ್ತರಿಗೆ ಕರೆ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಚೇರಿಯಲ್ಲಿ ಮಾತನಾಡಿದ ಅವರು, ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಮಲದ ಹೂ. ವ್ಯಕ್ತಿ ಯಾರು ಎಂಬುದನ್ನು ವರಿಷ್ಠರು ಸೂಕ್ತ ಸಮಯದಲ್ಲಿ ಘೋಷಣೆ ಮಾಡುತ್ತಾರೆ.
ಕಳೆದ ಬಾರಿಗಿಂತಲೂ ದಾಖಲೆ ಮತಗಳಿಂದ ಈ ಬಾರಿ ನಮ್ಮ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿ 4 ಲಕ್ಷ 80 ಸಾವಿರ ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು, ಈ ಬಾರಿ ಆ ದಾಖಲೆಯನ್ನು ಮುರಿದು ಇನ್ನೊಂದು ದಾಖಲೆಯನ್ನು ನಾವು ಸೃಷ್ಟಿಸುತ್ತೇವೆ ನಮ್ಮ ಕಾರ್ಯಕರ್ತರು ಹಾಗೂ ಮತದಾರರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿಗೆ ಮತ ಹಾಕಿದ್ರೆ ಅದು ರಾಮನಿಗೆ ಮತ ನೀಡಿದಂತೆ ಎಂದರು.
ಬಿಜೆಪಿಗೆ ಮತ ಚಲಾಯಿಸಿದರೆ ಅದು ನರೇಂದ್ರ ಮೋದಿಗೆ ಮತ ಹಾಕಿದಂತೆ. ಜತೆಗೆ, ದೇಶದ ಐಕ್ಯತೆಗೆ ಮತ ನೀಡಿದಂತೆ. ಈ ಸಂದೇಶವನ್ನು ಜನರಿಗೆ ತಲುಪಿಸೋಣ, ಅವರಲ್ಲಿ ಜಾಗೃತಿ ಮೂಡಿಸೋಣ. ಎಲ್ಲರೂ ಮತದಾನ ಮಾಡುವಂತೆ ನಾವು ಮಾಡೋಣ ಎಂದು ಕಾರ್ಯರ್ತರು ಹಾಗೂ ಮುಖಂಡರಿಗೆ ಸೂಚಿಸಿದ್ದಾರೆ.