ಕೋಲಾರ: ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಹೆಸರು ಹೇಳದೆ ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಹೆಸರಲ್ಲಿ ಮತ ಯಾಚಿಸುತ್ತಿದ್ದು, ಆದರೆ ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ಇದು ಪ್ರಯೋಜನಕ್ಕೆ ಬರುವುದಿಲ್ಲವೆಂದು ಮತದಾರರು ಅರಿತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೇಶದ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದ್ದು, ಇಂತಹ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಮತ ನೀಡಬೇಕು ಎಂದರು.ಕಾಂಗ್ರೆಸ್‌ಗೆ ಮತ ಹಾಕಿದರೆ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದಂತಾಗುತ್ತದೆ. ಹಿಂದಿನ ಯುಪಿಎ ಸರ್ಕಾರ ಹಗರಣಗಳ ಸರಮಾಲೆಯನ್ನೇ ಸೃಷ್ಟಿಸಿತ್ತು. ಲಾಲೂ ಪ್ರಸಾದ್ ಯಾದವ್, ಅರವಿಂದ ಕೇಜ್ರಿವಾಲ್, ಸೋನಿಯಾ ಗಾಂಧಿ ಎಲ್ಲರೂ ಜೈಲಲ್ಲಿದ್ದಾರೆ ಅಥವಾ ಜಾಮೀನಿನ ಮೇಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್‌ಗೆ ಮತ ನೀಡಿದರೆ ದೇಶದ ಅಭದ್ರತೆಗೆ ಬೆಂಬಲ ನೀಡಿದಂತಾಗುತ್ತದೆ. ಮೋದಿ ಬಂದ ನಂತರ ಜಮ್ಮು – ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆತು ಪಾಕಿಸ್ತಾನದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದನ್ನು ನೋಡಿದ್ದೇವೆ. ಆದ್ದರಿಂದ ಕಾಂಗ್ರೆಸ್‌ಗೆ ಮತ ನೀಡಿದರೆ ದೇಶಕ್ಕೆ ಸುರಕ್ಷತೆ ಸಿಗುವುದಿಲ್ಲ ಎಂದರು.
ಡಿ. ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಎತ್ತಿನ ಹೊಳೆ ಯೋಜನೆಗೆ ಚಾಲನೆ ದೊರೆತಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಯೋಜನೆಗೆ 3,000 ಕೋಟಿ ರೂ. ನೀಡಿದ್ದರು. ಕಾಂಗ್ರೆಸ್ ಬಂದ ನಂತರ ಕೋಲಾರದಿಂದ ಆರಂಭವಾಗಿ ಎಲ್ಲ ಕಡೆ ಬರಗಾಲವಿದೆ. ಯಾರಿಗೂ ನೀರಿಲ್ಲ, ಒಂದೇ ಒಂದು ಗೋಶಾಲೆಯನ್ನೂ ಮಾಡಿಲ್ಲ. ಸರ್ಕಾರ ಜನರ ಸಂಕಷ್ಟಕ್ಕೆ ಗಮನ ನೀಡಿಲ್ಲ. ಸಿಎಂ ಸಿದ್ದರಾಮಯ್ಯನವರು ಮಜವಾದಿಯಾಗಿ ಸುತ್ತುತ್ತಿದ್ದಾರೆ ಎಂದು ದೂರಿದರು.
ಕೋಲಾರದಲ್ಲಿ ಕಾಂಗ್ರೆಸ್‌ನ ಸ್ಥಿತಿ ಮನೆಯೊಂದು ಎರಡು ಬಾಗಿಲಾಗಿದೆ. ರಮೇಶ್ ಕುಮಾರ್ ಮತ್ತು ಕೆ. ಎಚ್. ಮುನಿಯಪ್ಪ ಗ್ಯಾಂಗ್ ಇಲ್ಲಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯನವರ ಗ್ಯಾಂಗ್ ಕೂಡ ಇದೆ. ಈಗ ಕಾಂಗ್ರೆಸ್ ನಿಲ್ಲಿಸಿರುವ ಅಭ್ಯರ್ಥಿ ಹೊಸ ಗ್ಯಾಂಗ್‌ಗೆ ಸೇರಿದ್ದಾರೆ. ಮೂರು ತಲೆಮಾರಿಗೆ ಆಗುವಷ್ಟು ಲೂಟಿ ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಈ ಹಿಂದೆಯೇ ಹೇಳಿದ್ದಾರೆ ಎಂದರು.