ಬೆಂಗಳೂರು: ಶಕ್ತಿ ಕೇಂದ್ರ ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಹೈಕೋರ್ಟ್‌ಗೆ ನಿತ್ಯ ಬರುವ ವಕೀಲರು, ಕಕ್ಷಿದಾರರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕಾದರೆ ಕನಿಷ್ಠ ಅರ್ಧ ತಾಸು ಕಾಯಬೇಕಾದ ಸ್ಥಿತಿ ಇದೆ.
ಹೈಕೋರ್ಟ್ ಹಾಗೂ ಹಳೆಯ ಕೆಜಿಐಡಿ ಕಟ್ಟಡದ ಮಧ್ಯ ಭಾಗದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿದ್ದರೂ ಅದು ಸಾಕಾಗುತ್ತಿಲ್ಲ ಪಾರ್ಕಿಂಗ್ ಸಮಸ್ಯೆಯಿಂದಾಗಿ ಕೋರ್ಟ್ ಆರಂಭವಾಗುವ ಸಮಯ ಮತ್ತು ಸಂಜೆ ಕಲಾಪ ಮುಗಿಯುವ ಸಮಯದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಬೆಳಗ್ಗೆ 9 ರಿಂದಲೇ ಪಾರ್ಕಿಂಗ್ ತಾಣದಲ್ಲಿಸಾಲಾಗಿ ನಿಲುಗಡೆಯಾಗುವ ವಾಹನಗಳು, ರಾತ್ರಿ 7 ಗಂಟೆಯಾದರೂ ಕರಗುವುದೇ ಇಲ್ಲ. ಬಹುತೇಕ ಸಮಯದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲೂ ಪರದಾಡಬೇಕಾದ ಸ್ಥಿತಿ ಇದೆ. ಕಾರುಗಳನ್ನು ನಿಲ್ಲಿಸಲು ಎಲ್ಲಿ ಜಾಗ ಖಾಲಿಯಾಗುತ್ತದೋ ಎಂದು ಕಾದು ಕೂರಬೇಕಿದೆ.
ಹೈಕೋರ್ಟ್ ಮುಂಭಾಗದಲ್ಲಿ ನ್ಯಾಯಮೂರ್ತಿಗಳ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಹಿಂಭಾಗದಲ್ಲಿ ವಕೀಲರು, ಸಿಬ್ಬಂದಿ ವಾಹನಗಳ ನಿಲುಗಡೆಗೆ ಅನುಮತಿ ನೀಡಲಾಗಿದೆ. ಆದರೆ, ಅಲ್ಲಿಯೂ ಹೆಚ್ಚಿನ ವಾಹನಗಳನ್ನು ನಿಲ್ಲಿಸಲಾಗದು.