ರಾಯಚೂರು: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದೆ. ಈ ಹಿನ್ನೆಲೆ ಮಾವು ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಒಂದು ತಿಂಗಳ ತಡವಾಗಿ ನಾನಾ ತಳಿಯ ಹಣ್ಣುಗಳು ಲಗ್ಗೆ ಇಟ್ಟಿದ್ದು ಮಾವು ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.
ಜಿಲ್ಲೆಯಲ್ಲಿ ಈ ಬಾರಿ 1258 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಆದರೆ ನೀರಿನಾಂಶ ಕಡಿಮೆಯಿರುವುದರಿಂದ 1000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈ ಬಾರಿ ಇಳುವರಿ ಬಂದಿದೆ. ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿ, ಯರಗೇರಾ ಭಾಗದಲ್ಲಿ ತುಂಗಭದ್ರಾ, ಕೃಷ್ಣಾ ನದಿ ದಡದ ಗ್ರಾಮಗಳಲ್ಲಿ ಮಾವನ್ನು ಯಥೇಚ್ಛವಾಗಿ ಬೆಳೆಯಾಗುತ್ತಿತ್ತು. ಆದರೆ, ಈ ಬಾರಿ ಮಾತ್ರ ಫಸಲು ಅಂದುಕೊಂಡಂತೆ ಬಂದಿಲ್ಲ. ಎಕರೆಗೆ ಕನಿಷ್ಠ 10 ಟನ್‌ನಿಂದ ನಿಂದ 15 ಟನ್‌ವರೆಗೆ ಬರಬೇಕಿದ್ದ ಇಳುವರಿ ಈ ಸಲ ಕೇವಲ 5 ರಿಂದ 6 ಟನ್ ಮಾತ್ರ ಬಂದಿದೆ.
ಈ ಎಲ್ಲ ತಳಿ ಹಣ್ಣುಗಳ ಪೈಕಿ ಆಫೂಸ್ ಮತ್ತು ತೋತಾಪುರಿಯಂತಹ ಜವಾರಿ ಹಣ್ಣುಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಪ್ರತಿ ವರ್ಷ ಯುಗಾದಿ ಬಳಿಕ ಮಾರುಕಟ್ಟೆಗೆ ಆಗಮಿಸುವ ಮಾವಿನ ಹಣ್ಣುಗಳು ಸದ್ಯ ಕಮ್ಮಿ ಇಳುವರಿ ಹಿನ್ನೆಲೆ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿವೆ.
ಪರಿಣಾಮ, ಗ್ರಾಹಕರಿಗೆ ಸ್ವಲ್ಪ ಹೊರೆಯಾಗಿದೆ. ಚಳಿಗಾಲದ ಸಮಯದಲ್ಲಿ ಮಾವಿನ ಹೂ ಹಾಗೂ ಮೊಗ್ಗುಗಳಿಗೆ ಇಬ್ಬನಿ ಬೀಳುವುದು, ಮಣ್ಣಿನಲ್ಲಿ ತೇವಾಂಶದ ಕೊರತೆ, ಅಕಾಲಿಕ ಗಾಳಿ ಮಳೆ ಹಾಗೂ ನಾನಾ ರೋಗ ತಗುಲಿ ಮಾವಿನ ಹಣ್ಣು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲಎಂಬುದು ವ್ಯಾಪಾರಸ್ಥರ ಅಳಲಾಗಿದೆ.
ಜಿಲ್ಲಾದ್ಯಂತ ಮಾವಿನ ತೋಟ ಹೊಂದಿದ ಮಾಲೀಕರು, 100 ಮಾವಿನ ಗಿಡಗಳುಳ್ಳ ತೋಟವನ್ನು ವರ್ಷಕ್ಕೆ 4 ಲಕ್ಷ ರೂ.ಯಂತೆ ಲೀಜ್‌ಗೆ ನೀಡುತ್ತಿದ್ದು, ಒಂದು ಮಾವಿನ ತೋಟಕ್ಕೆ ಔಷಧ, ರಸಗೊಬ್ಬರ ಸೇರಿ ಅಂದಾಜು 8 ಲಕ್ಷ ರೂ.ಖರ್ಚಾಗಲಿದೆ.ಜಿಲ್ಲೆಯಲ್ಲಿ ಪ್ರಮುಖವಾಗಿ ಮಲ್ಲಿಕಾ, ದಶೇರಿ, ಕೇಸರ್ ತಳಿಯ ಹಣ್ಣುಗಳನ್ನು ರೈತರು ಬೆಳೆಯುತ್ತಾರೆ. ಅನ್ಯ ರಾಜ್ಯದಿಂದ ಆಫೂಸ್, ಕಲ್ಮಿ, ಬೇನಿಶಾ, ಸಿಂಡುಲಾ, ರಸಪುರಿ, ರತ್ನಗಿರಿ ಸೇರಿ ನಾನಾ ತಳಿಯ ಮಾವಿನ ಹಣ್ಣುಗಳು ಗಮನ ಸೆಳೆಯುತ್ತಿವೆ.
ಆದರಲ್ಲೂಈ ಬಾರಿ ಹೆಚ್ಚಿನ ಬಿಸಿಲಿನ ಪ್ರಮಾಣದಿಂದ ಮಾವಿನ ಸಿಹಿ ಹೆಚ್ಚಳವಾಗಿದ್ದರಿಂದ ಕೆಜಿ ಹಣ್ಣಿಗೆ 150 ರಿಂದ 200ರೂ.ಯಂತೆ ಮಾರಾಟವಾಗುತ್ತಿದೆ. ಮುಂದಿನ 15 ದಿನಗಳೊಳಗಾಗಿ ತೋತಾಪುರಿ, ಬದಾಮಿ, ಸವಾರಿ ತಳಿಗಳ ಹಣ್ಣುಗಳು ಕೂಡ ಮಾರುಕಟ್ಟೆಗೆ ಬರಲಿವೆ.