ಬಾಗಲಕೋಟೆ:
ಮಕ್ಕಳ ರಕ್ಷಣಾ ನಿರ್ದೇಶನಾಲಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ನವನಗರದ ಸೆಕ್ಟರ ನಂ.4ರಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯಲ್ಲಿ ಮಕ್ಕಳ ಸಹಾಯವಾಣಿ-1098 ಕೇಂದ್ರವನ್ನು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳು, ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ನೆರವು ಪಡೆಯಲು ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ ಮಾತನಾಡಿ ಜಿಲ್ಲಾ ಮಕ್ಕಳ ಸಹಾಯವಾಣಿಗೆ ಯಾವುದೇ ಕರೆ ಬಂದಲ್ಲಿ ಅಧಿಕಾರಿಗಳು, ಸಿಬ್ಬಂದಿ ಸೇವಾ ಮನೋಭಾವ, ತಾಳ್ಮೆಯಿಂದ ಆಲಿಸಬೇಕು. ಸಂಕಷ್ಟ ಪರಿಸ್ಥಿತಿಯಲ್ಲಿರುವ ಎಷ್ಟೋ ಮಕ್ಕಳು ಅನಾಥ, ಏಕಪೋಷಕ, ನಿರ್ಗತಿಕ, ಪರಿತ್ಯಕ್ತ, ತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ ಒಳಗಾದ, ಶೋಷಣೆಗೆ ಒಳಗಾಗುತ್ತಿರುವ ಮಕ್ಕಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಾವುದೇ ಕರೆಯನ್ನು ನಿರ್ಲಕ್ಷಿಸಬಾರದು. ಅಂತಹ ಮಕ್ಕಳಿಗೆ ಸೂಕ್ತ ಮತ್ತು ತುರ್ತು ಸೇವೆಯನ್ನು ನೀಡಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್ ಮಾತನಾಡಿ ನಿಮ್ಮ ಕೆಲಸಕ್ಕೆ ನೀವು ಗೌರವ ನೀಡಬೇಕು. ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತಾಯಿಯ ಹೃದಯವಂತರಾಗಿ ಸಮಾಧಾನದಿಂದ ಅವರ ಸಮಸ್ಯೆ ಆಲಿಸಬೇಕು. ತ್ಯಾಗ ಮನೋಭಾವದಿಂದ ಸಾಧ್ಯವಾದಷ್ಟು ನೊಂದ ಎಲ್ಲಾ ಮಕ್ಕಳಿಗೆ ನ್ಯಾಯ ಒದಗಿಸುವಂತೆ ಸಹಾಯವಾಣಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತಿಳಿಸಿದರು.
ಪ್ರಭಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿಸಾಬ ಮುಲ್ಲಾ ಮಾತನಾಡಿ ಮಕ್ಕಳ ಸಹಾಯವಾಣಿ-1098 ಇದುವರೆಗೂ ಸ್ವಯಂ ಸೇವಾ ಸಂಸ್ಥೆ ಕಡೆಯಿಂದ ನಿರ್ವಹಿಸಲ್ಪಡುತ್ತಿತ್ತು ಸರ್ಕಾರದ ನಿರ್ದೇಶನದಂತೆ ಇದು ಈಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಚೇರಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಅರ್ಜುನ ಮಿರ್ಜಿ, ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ, ಪೋಲಿಸ್ ಇಲಾಖೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ-1098 ಸಿಬ್ಬಂದಿ ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ.