ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರಿಗೆ (Part Time Lecturers) ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವೇತನ ಪರಿಷ್ಕರಣೆ ಸಮಿತಿ ವರದಿ ಆಧರಿಸಿ ಉನ್ನತ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಅರೆಕಾಲಿಕ ಉಪನ್ಯಾಸಕರಿಗೆ 5 ರಿಂದ 8 ಸಾವಿರ ರೂಪಾಯಿವರೆಗೆ ಗೌರವಧನ ಹೆಚ್ಚಿಸಲಾಗಿದೆ.
ಎಐಸಿಟಿಯು ಮಾನದಂಡ ಇರುವವರಿಗೆ ಸರ್ಕಾರಿ ಕಾಲೇಜುಗಳಲ್ಲಿ 5 ವರ್ಷ ಮೇಲ್ಪಟ್ಟವರಿಗೆ 32 ಸಾವಿರ, ಪಾಲಿಟೆಕ್ನಿಕ್‌ಗಳಲ್ಲಿ 28 ಸಾವಿರ ರೂ. ಗೌರವಧನ ಹಾಗೂ 5 ವರ್ಷ ಒಳಗಿನವರಿಗೆ ಕ್ರಮವಾಗಿ 30 ಸಾವಿರ ರೂ. ಹಾಗೂ 26 ಸಾವಿರ ಸಾವಿರ ರೂ. ನೀಡಲಾಗುತ್ತದೆ. ಇನ್ನು ಎಐಸಿಟಿಯು ಮಾನದಂಡಕ್ಕಿಂತ ಕಡಿಮೆ ಹಾಗೂ 5 ವರ್ಷ ಪೂರೈಸಿದವರಿಗೆ 28 ಸಾವಿರ ರೂ. ಹಾಗೂ 24 ಸಾವಿರ ರೂ. ನಿಗದಿ ಮಾಡಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅರೆಕಾಲಿಕ ಉಪನ್ಯಾಸಕರುಗಳಿಗೆ ಕ್ರಮವಾಗಿ ಹಾಲಿ ವಾರಕ್ಕೆ ಗರಿಷ್ಠ 8/9/9 ಗಂಟೆಗಳ ಕಾರ್ಯಭಾರಕ್ಕೆ ಬದಲಾಗಿ, ವಾರಕ್ಕೆ ಗರಿಷ್ಠ 15/17/14 ಗಂಟೆಗಳ ಕಾರ್ಯಭಾರವನ್ನು ನಿಗದಿಪಡಿಸಿದ್ದು, ಅವರ ಮಾಸಿಕ ಗೌರವಧನವನ್ನು ಭವಿಷ್ಯವರ್ತಿಯಾಗಿ ಅಂದರೆ ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಷರತ್ತುಗಳಿಗೊಳಪಟ್ಟು ನಿಗದಿಪಡಿಸಿ ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ) ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಪ್ಪ ಎಸ್. ತುರಕನೂರ ಆದೇಶ ಹೊರಡಿಸಿದ್ದಾರೆ.