ದೆಹಲಿ:ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಹಾರದಲ್ಲಿ ಏನಾದರೂ ಪ್ರಮುಖ ಘಟನೆ ನಡೆಯಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಮೈತ್ರಿಕೂಟದೊಂದಿಗೆ “ಸರಿಯಾಗಿಲ್ಲ” ಎಂದು ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಅವರು ತಿಳಿಸಿದರು.
ಈ ವರ್ಷದ ಜನವರಿಯಲ್ಲಿ ಕುಮಾರ್ ಎನ್‌ಡಿಎಗೆ ಹಠಾತ್ ವಾಪಸಾದ ನಂತರ ಉಪಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದ ತೇಜಸ್ವಿ ಯಾದವ್, ಪಾಟ್ನಾದಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಈ ಮಾತು ಹೇಳಿದ್ದರು.
“ರಾಜ್ಯಪಾಲರು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಸೂಚನೆಗಳನ್ನು ನೀಡುತ್ತಾರೆ ಎಂದು ನಾನು ತಿಳಿದುಕೊಂಡಿದ್ದೇನೆ. ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಯು ಯಾವುದೇ ಸಂವಹನ ಇಲ್ಲದೆ ತಮ್ಮ ತಮ್ಮ ಸ್ಥಾನಗಳ ಮೇಲೆ ಕೇಂದ್ರೀಕರಿಸುತ್ತಿವೆ ಎಂದು ಆರ್‌ಜೆಡಿ ನಾಯಕ ಆರೋಪಿಸಿದ್ದಾರೆ.
ಜೂನ್ 4 ರ ನಂತರ ಬಿಹಾರ ಯಾವುದೋ ದೊಡ್ಡ ವಿಷಯಕ್ಕೆ ಸಾಕ್ಷಿಯಾಗಲಿದೆ ಎಂಬ ನನ್ನ ಆತಂಕವನ್ನು ಈ ಎಲ್ಲಾ ವಿಷಯಗಳು ದೃಢಪಡಿಸುತ್ತವೆ ಎಂದಿದ್ದಾರೆ ಅವರು. ಅದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬಣ ಅದ್ಭುತ ಗೆಲುವಿನತ್ತ ಸಾಗುತ್ತಿದೆ ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ ಬಣ ಅದ್ಭುತ ಗೆಲುವಿನತ್ತ ಸಾಗುತ್ತಿದೆ. ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬಹುದು. ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗ ನರೇಂದ್ರ ಮೋದಿಯನ್ನು ಸೋಲಿಸುತ್ತವೆ ಎಂದು ತೇಜಸ್ವಿ ಯಾದವ್ ತಿಳಿಸಿದರು.
“ಲೋಕಸಭಾ ಚುನಾವಣೆಯ ನಂತರ ಚಾಚಾ (ನಿತೀಶ್ ಕುಮಾರ್ ಅವರನ್ನು ಉಲ್ಲೇಖಿಸಿ) ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾನು ಭವಿಷ್ಯ ನುಡಿದ ನಂತರ, ಅವರು ಪ್ರಚಾರಕ್ಕೆ ಹೋಗುತ್ತಿಲ್ಲ” ಎಂದು ಯಾದವ್ ಅವರು ಒಂದೆರಡು ದಿನಗಳ ಹಿಂದೆ ಹೇಳಿಕೊಂಡಿದ್ದನ್ನು ಉಲ್ಲೇಖಿಸಿ ಹೇಳಿದ್ದಾರೆ.