ಬಾಗಲಕೋಟೆ
ದೇಶದ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅವರನ್ನು ಉದ್ಧಾರಗೊಳಿಸಿದ ಇಂದಿರಾಗಾಂಧಿ ಅವರ ಹಾದಿಯಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಸಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಜಿಲ್ಲೆಯ ಅಮೀನಗಡ ಪಟ್ಟಣದ ಎಸ್‌ಪಿಆರ್ ಕಚೇರಿಯಲ್ಲಿ ನಗರ ಹಾಗೂ ಯುವ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮಾಗಾಂ, ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷ ಮರೆಯುವುದಿಲ್ಲ ಎಂದರು.
ಬಡವರ ಮಾತೆ ಎಂದೆನಿಸಿಕೊಂಡ ಇಂದಿರಾಗಾಂಧಿ ಅವರ ಯೋಜನೆಗಳು ದೇಶದ ಆರೂವರೆ ಲಕ್ಷ ಹಳ್ಳಿಗಳಲ್ಲಿ ಇಂದಿಗೂ ಮನೆ ಮಾತಾಗಿವೆ. ಇಂದಿನ ಪ್ರಧಾನಿಗಳಂತೆ ರೋಡ್ ಶೋ, ಗಂಟೆಗಟ್ಟಲೆ ಭಾಷಣ ಮಾಡದೆ ತಮ್ಮ ಬಡವರ ಕಾಳಜಿ ಮೂಲಕವೇ ಇಂದಿರಾಗಾಂಧಿ ಮನೆ ಮಾತಾಗಿದ್ದರು. ಸದ್ಯದ ಸಿಎಂ ಸಿದ್ದು ಹಾಗೂ ಡಿಸಿಎಂ ಡಿಕೆಶಿ ಅವರು ಗ್ಯಾರಂಟಿ ಯೋಜನೆಗಳ ಮೂಲಕ ಇಂದಿರಾ ಕಂಡ ಕನಸನ್ನು ನನಸಾಗಿಸುತ್ತಿದ್ದಾರೆ. ಸರಕಾರದ ಈ ಯೋಜನೆಗಳು ರಾಜ್ಯದ ಶೇ.೮೦ರಷ್ಟು ಜನರಿಗೆ ತಲುಪಿವೆ ಎಂದು ಹೇಳಿದರು.
ಮುಖಂಡರಾದ ಎಸ್.ಎಸ್.ಚಳ್ಳಗಿಡದ, ಬಿ.ಎಸ್.ನಿಡಗುಂದಿ, ಪೀರಾ ಖಾದ್ರಿ, ವಿಷ್ಣು ಗೌಡರ, ಪಪಂ ಸದಸ್ಯ ರಮೇಶ ಮುರಾಳ, ತುಕಾರಾಮ ಲಮಾಣಿ, ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್.ಬಂಡಿವಡ್ಡರ, ಅಮರೇಶ ಮಡ್ಡಿಕಟ್ಟಿ, ವಿಲಾಸ ಮೆಣಸಗಿ, ಗೌಡಪ್ಪ ಹೊರಗಿನಮನಿ, ಸಿಕಂದರ ಲಾಲಕೋಟಿ, ಭೀಮಸೇನ್ ಮಜ್ಜಗಿಯವರ ಇತರರು ಇದ್ದರು.