ಬಾಗಲಕೋಟೆ
ಕರ್ನಾಟಕ ಲೋಕಸೇವಾ ಆಯೋಗವು ನವ್ಹಂಬರ್ 4 ಮತ್ತು 5 ರಂದು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಅವಕಾಶ ನೀಡದಂತೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ. ಎಮ್. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ನಡೆದ ಕೆ ಪಿ ಎಸ್ ಸಿ ಆಯೋಗ ಅಧಿಸೂಚಿಸಿರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕನ್ನಡ ಭಾಷಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿ ವಿವರವಾದ ಮಾಹಿತಿಯುಳ್ಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಕರ್ತವ್ಯಕ್ಕೆ ತೊಡಗಿರುವರೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳ ಕರ್ತವ್ಯವನ್ನು ಚುನಾವಣಾ ಕರ್ತವ್ಯವೆಂದು ತಿಳಿದು ಅತ್ಯಂತ ಜಾಗೃತಿಯಿಂದ ಕೆಲಸ ಮಾಡಬೇಕು. ಸಿ ಸಿ ಕ್ಯಾಮರಾ ಅಳವಡಿಸುವುದು ಮತ್ತು ಅಭ್ಯರ್ಥಿಗಳ ಫ್ರಿಸ್ಕಿಂಗ್ ಕಡ್ಡಾಯವಾಗಿರುತ್ತದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರವರೆಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು (144 ಕಲಂ) ಜಾರಿಗೊಳಿಸಲಾಗಿರುತ್ತದೆ ಎಂದರು.
ಕೆ ಪಿ ಎಸ್ ಸಿ ಆಯೋಗವು ಬಾಗಲಕೋಟೆ ನಗರದಲ್ಲಿರುವ ಸರಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳನ್ನು ಮಾತ್ರ ಪರೀಕ್ಷಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನ ಶನಿವಾರದಂದು ನಡೆಯುವ ಪರೀಕ್ಷೆಗೆ 4542 ಅಭ್ಯರ್ಥಿಗಳು 14 ಕೇಂದ್ರಗಳಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಹಾಗೂ ಎರಡನೆ ದಿನ ಭಾನುವಾರದಂದು 3579 ಅಭ್ಯರ್ಥಿಗಳು 11 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ನ್ನು ಬೆಳಿಗ್ಗೆ 10 ರಿಂದ 11.30 ರವರೆಗೆ ಮತ್ತು ಪತ್ರಿಕೆ- 2ನ್ನು ಮಧ್ಯಾಹ್ನ 2 ರಿಂದ 4 ರವರೆಗೆ ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಬಿ ವೃಂದದ ಅಧಿಕಾರಿಗಳನ್ನು ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು, ಅಗತ್ಯ ಅರೆವೈದ್ಯಾಧಿಕಾರಿಗಳ ಸಿಬ್ಬಂದಿಯನ್ನು ಜಿಲ್ಲಾ ವೈದ್ಯಾಧಿಕಾರಿ ನೇಮಿಸಬೇಕು. ಎಲ್ಲಾ 14 ಪರೀಕ್ಷಾ ಕೇಂದ್ರಗಳಿಗೂ ಅಗತ್ಯ ಬಂದೋಬಸ್ತಗಾಗಿ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಯಿಂದ ನಿಯೋಜಿಸಲಾಗುವುದು ಎಂದರು.
ಪರೀಕ್ಷಾರ್ಥಿಗಳು ಕೇವಲ 2 ಬಾಲ್ ಪೆನ್ ಮತ್ತು ಪ್ರವೇಶ ಪತ್ರ ತರಲು ಅವಕಾಶವಿದ್ದು ಇನ್ನುಳಿದಂತೆ ಯಾವುದೇ ಡಿಜಿಟಲ್ ಉಪಕರಣಗಳನ್ನು ತರುವಂತಿರುವದಿಲ್ಲ. ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗುವರೆಲ್ಲರೂ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಎ ಸಿ ಶ್ವೇತಾ ಬೀಡಿಕರ್ ಡಿ ಡಿ ಪಿ ಐ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು