ಬೆಂಗಳೂರು: (Challenging star dashran) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಇದಕ್ಕೆ ಜಾತಿ ಬಣ್ಣ ಬಳಿಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಒಕ್ಕಲಿಗ ಸಮುದಾಯದವರು ದರ್ಶನ್ ಹೇಳಿಕೆ ಖಂಡಿಸಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಒಬ್ಬ ಪ್ರಭಾವಿ ಸಮುದಾಯದ ನಾಯಕನ ವಿರುದ್ಧ ದರ್ಶನ್ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಒಕ್ಕಲಿಗ ನಾಯಕರ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಒಂದು ಸಮುದಾಯ ರೊಚ್ಚಿಗೇಳುವ ಮುನ್ನ ಕಾನೂನು ಕ್ರಮ ಕೈಗೊಳ್ಳಿ ಎನ್ನುವ ಒತ್ತಾಯ ಕೇಳಿಬರುತ್ತಿದೆ.
ದರ್ಶನ್ ವಿರುದ್ಧ ನೀಡಲಾಗಿರುವ ದೂರು ಆಧರಿಸಿ ಈಗಾಗಲೇ ಆರ್. ಆರ್ ನಗರ ಹಾಗೂ ಚಂದ್ರಾಲೇಔಟ್ ಪೊಲೀಸರು ಎನ್‌ಸಿಆರ್ ದಾಖಲಿಸಲಾಗಿದೆ. ಇದೀಗ ನಿಜಕ್ಕೂ ನಟ ದರ್ಶನ್ ಒಂದು ಸಮುದಾಯದವರ ಬಗ್ಗೆ ಮಾತನಾಡಿದ್ದಾರಾ? ದರ್ಶನ್ ವಾಕ್‌ಸಮರದಲ್ಲಿ ಯಾವ ಸಮುದಾಯವನ್ನು ಉಲ್ಲೇಖಿಸಿಲ್ಲ. ಆದರೂ ಈ ರೀತಿಯ ಆರೋಪ ಏಕೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ನಟ ದರ್ಶನ್ ಹಾಗೂ ಉಮಾಪತಿ ತಿಕ್ಕಾಟದ ವಿಚಾರವಾಗಿ ವಕೀಲರಾದ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
“ನೇರವಾಗಿ ಮಾತನಾಡುವವರಿಗೆ ಪ್ರಾಮಾಣಿಕವಾಗಿ ಇರುವವರಿಗೆ ಸಾಮಾನ್ಯವಾಗಿ ವಿವಾದಗಳು ಕಾಮನ್. ಅದು ದರ್ಶನ್ ಅವರಿಗೂ ಆಗುತ್ತಿದೆ. ಕೆಲವರಿಗೆ ಕಿವಿಮಾತು ಹೇಳಲು ಇಷ್ಟಪಡುತ್ತೀನಿ. ದರ್ಶನ್ ಯಾವುದೇ ಸಮುದಾಯದ ಬಗ್ಗೆ ಮಾತನಾಡಿಲ್ಲ” “ಯಾವುದೇ ಸಮುದಾಯಕ್ಕೆ ಎತ್ತಿಕೊಟ್ಟು ದಾರಿತಪ್ಪಿಸಿ, ಕಷ್ಟಪಟ್ಟು ಮೇಲೆ ಬಂದಿರುವಂತಹ ನಾಯಕ ನಟನಿಗೆ ಅನ್ಯಾಯ ಮಾಡುವ ಕೆಲಸ ದಯವಿಟ್ಟು ಮಾಡಬೇಡಿ. ಅದರಿಂದ ಆ ಸಮುದಾಯಕ್ಕೂ ಕೆಟ್ಟ ಹೆಸರು ಬರುತ್ತದೆ. ಮತ್ತೊಂದು ಸಮುದಾಯದವರು ಎದ್ದೇಳುವಂತಾಗುತ್ತದೆ. ಸಮುದಾಯ -ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಯಾರು ಮಾಡಬಾರದು” ಎಂದಿದ್ದಾರೆ.
“ದರ್ಶನ್ ಅವ್ರು ಯಾವುದೇ ಸಮುದಾಯದ ಬಗ್ಗೆ ಎಲ್ಲೂ ಮಾತನಾಡಿಲ್ಲ. ವೈಯಕ್ತಿಕವಾಗಿ ನಿಂದನೆ ಮಾಡಿದವರ ಬಗ್ಗೆ ವೈಯಕ್ತಿಕವಾಗಿ ಉತ್ತರ ಕೊಟ್ಟಿದ್ದಾರೆ. ಅಷ್ಟೇ ಆಗಿರುವುದು. ನಾನು ವಕೀಲನಾಗಿ ಹೇಳುತ್ತಿದ್ದೇನೆ. ನಾನು ಯಾರ ಪರವೂ ಮಾತನಾಡುತ್ತಿಲ್ಲ. ನಾನು ಕೂಡ ಒಕ್ಕಲಿಗ, ನಾನು ಗೌಡ. ವೈಯಕ್ತಿಕವಾಗಿ ನನಗೂ ಸಮಸ್ಯೆಗಳು ಆಗುತ್ತದೆ. ಹಾಗಂತ ನನಗೆ ಸಮಸ್ಯೆ ಆದಾಗ ನಮ್ಮ ಸಮುದಾಯದವರು ಎದ್ದು ಹೋರಾಟ ಮಾಡಿದ್ದಾರಾ? ಇಲ್ಲ ಅಲ್ಲವೇ?” “ನಾನು ಹೇಳುವ ಕಿವಿಮಾತು ಏನು ಅಂದ್ರೆ ಸಮುದಾಯ ಎನ್ನುವುದು ಸಮುದಾಯದವರಿಗೆ ಒಳಿತು ಮಾಡಲು ಇರಬೇಕು. ರಾಜಕಾರಣ ಮಾಡುವುದಕ್ಕಲ್ಲ. ಜಾತಿ ಎನ್ನುವುದು ರಾಜಕಾರಣ ಮಾಡುವ ಅಸ್ತ್ರ ಆಗಿಬಿಟ್ಟಿದೆ. ನಮ್ಮ ಒಕ್ಕಲಿಗ ಸಂಘ ಎಷ್ಟು ದೊಡ್ಡಮಟ್ಟಕ್ಕಿತ್ತು. ಅದನ್ನು ಕೆಳಮಟ್ಟಕ್ಕೆ ತರಬೇಡಿ. ಯಾರೋ ಒಬ್ಬರ ವೈಯಕ್ತಿಕ ಹಿತಾಸಕ್ತಿ ಕಾಪಾಡಲು ಸಂಘ ಇಲ್ಲ” ‘ಎಂದಿದ್ದಾರೆ.
‘ಕಾಟೇರ’ ಸಕ್ಸಸ್ ಪಾರ್ಟಿ ಪ್ರಕರಣದಲ್ಲಿ ದರ್ಶನ್ ಹಾಗೂ ಇತರರ ವಿರುದ್ಧ ವಕೀಲ ನಾರಾಯಣಸ್ವಾಮಿ ವಾದಿಸಿದ್ದರು. ದರ್ಶನ್‌ಗೆ ನೋಟಿಸ್ ಕೊಟ್ಟಿದ್ದು ತಪ್ಪು ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದಿದ್ದರು.