ಮಂಗಳೂರು: ತುಳುನಾಡಿನಲ್ಲಿ ದೈವಾರಾಧನೆ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಇತ್ತೀಚೆಗೆ ಏಯ್ಯಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಬದಿಯಲ್ಲಿ ಇರುವ ನಾಗಮಂಟಪ ರಸ್ತೆಯ ರಕ್ತೇಶ್ವರಿ ಕ್ಷೇತ್ರದಲ್ಲಿ ದೈವದ ಗೆಜ್ಜೆ ಶಬ್ಧದ ಕೇಳಿ ಬರುತ್ತಿದೆ ಎಂದು ಹೇಳಲಾಗುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೂಡ ನಡೆದಿದ್ದು, ಸದ್ಯ ಈಗ ಪ್ರಶ್ನಾ ಚಿಂತನೆ ಹಾಕಿದಾಗ ರಕ್ತೇಶ್ವರಿ ದೈವದ ಇರುವಿಕೆ ಪತ್ತೆಯಾಗಿದೆ. ರಕ್ತೇಶ್ವರಿ ದೈವದ ಪವಾಡಕ್ಕೆ ಜನ ಮನಸೋತಿದ್ದಾರೆ.ತುಳುನಾಡ ದೈವಾರಾಧನೆಯ ಮತ್ತೊಂದು ವಿಸ್ಮಯಕಾರಿ ಕಥೆ ಏಯ್ಯಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಕೇಳಿ ಬಂದಿದೆ. ಇಲ್ಲಿನ ಜನರಿಗೆ ಬೆಂಕಿ ಬೆಳಕು, ಗೆಜ್ಜೆ ಸದ್ದಿನ ಜೊತೆಗೆ ರಕ್ತೇಶ್ವರಿ ದೈವ ಸಂಚರಿಸುವ ಅನುಭವಗಳಾಗುತ್ತಿವೆ.
ಗ್ರಾಮದ ಅನೇಕ ಜನ ಬೆಳಕಿನ ದರ್ಶನ, ಸದ್ದಿನ ಅನುಭವ ಮಾಡಿದ್ದು, ಅನುಭವದಿಂದ ಚಿಂತೆಗೆ ಬಿದ್ದಿದ್ದ ಜನರಿಗೆ ದೈವದ ಪವಾಡ ಇರುವುದು ಪತ್ತೆಯಾಗಿದೆಯಂತೆ.ಬಹಳ ವರ್ಷಗಳ ಹಿಂದೆ ಏಯ್ಯಾಡಿ ರಕ್ತೇಶ್ವರಿ ದೈವ ಆರಾಧನೆಗೆ ಒಳಗಾಗಿದ್ದ ಪ್ರದೇಶ. ಆದರೆ ಕೆಲವು ವರ್ಷಗಳಿಂದ ರಕ್ತೇಶ್ವರಿ ದೈವದ ಆರಾಧನೆ ಇಲ್ಲಿ ಸ್ಥಗಿತವಾಗಿತ್ತು. ಗ್ರಾಮದಲ್ಲೊಂದು ದೈವಸ್ಥಾನವಿದೆ ಎಂಬ ಬಗ್ಗೆ ಗ್ರಾಮಸ್ಥರಿಗೂ ಗೊತ್ತಿರಲಿಲ್ಲ. ಆದರೆ ಪ್ರಶ್ನಾ ಚಿಂತನೆಯಲ್ಲಿ ದೈವದ ಕುರುಹು ಪತ್ತೆ ಆಗಿದೆ. ಪ್ರಶ್ನಾ ಚಿಂತನೆಯಲ್ಲಿ ನಾಗಾರಧನೆಯ ಸುಳಿವು ಸಿಕ್ಕಿತ್ತು.
ಎಯ್ಯಾಡಿಯ ಪೊದೆಗಳಿಂದ ಆವರಿಸಿದ್ದ ಜಾಗ ಪ್ರಶ್ನಾ ಚಿಂತನೆಯಲ್ಲಿ ಪತ್ತೆಯಾಗಿತ್ತು. ಆ ಜಾಗದಲ್ಲಿ ದೀಪ ಹಚ್ಚುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಯಿತು. ಸೂಚನೆಯಂತೆ ನಾಗನ ಹುತ್ತದ ಬಳಿ ಗ್ರಾಮದ ಜನರು ದೀಪ ಹಚ್ಚುತ್ತಿದ್ದರು. ಇಷ್ಟೆಲ್ಲ ಆದರೂ ಜನರಿಗೆ ಮತ್ತೆ ಮತ್ತೆ ಗೆಜ್ಜೆಯ ಸದ್ದು ಕೇಳಿ ಬರುತ್ತಿತ್ತಂತೆ ಎಂದು ಮಾಹಿತಿ ತಿಳಿದು ಬಂದಿದೆ.