This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics NewsState News

ಕರ್ನಾಟಕ ಹೈಕೋರ್ಟ್‌: ಗಡಿಪಾರಿಗೂ ಮುಂಚೆ ಆರೋಪಿ ಅಹವಾಲು ಆಲಿಕೆ ಕಡ್ಡಾಯ

ಕರ್ನಾಟಕ ಹೈಕೋರ್ಟ್‌: ಗಡಿಪಾರಿಗೂ ಮುಂಚೆ ಆರೋಪಿ ಅಹವಾಲು ಆಲಿಕೆ ಕಡ್ಡಾಯ

ಬೆಂಗಳೂರು: ಯಾವುದೇ ಆರೋಪಿಯ ವಿರುದ್ಧ ಗಡಿಪಾರು ಆದೇಶಗಳನ್ನು ಹೊರಡಿಸುವ ಮುನ್ನ ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗುತ್ತಿದೆ ಎಂಬ ಬಗ್ಗೆ ಆರೋಪಿಗೆ ದಾಖಲೆ ಒದಗಿಸಬೇಕು ಮತ್ತು ಅವರ ಅಹವಾಲು ಆಲಿಸುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದ್ದ ಮಾಹಿತಿ ಬೆಳಕಿಗೆ ಬಂದಿದೆ.

ಮೈಸೂರಿನ ಎಂ.ಆರ್‌. ಸಚಿನ್‌ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಅರ್ಜಿದಾರರ ಗಡಿಪಾರಿಗೆ ಉಪ ವಿಭಾಗಾಧಿಕಾರಿ 2024ರ ಮಾ 20ರಂದು ಹೊರಡಿಸಿದ್ದ ಆದೇಶ ರದ್ದುಗೊಳಿಸಿದ್ದು, ‘ಯಾರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗುತ್ತದೆಯೋ ಅಂತಹ ವ್ಯಕ್ತಿಗೆ ನಿಯಮದಲ್ಲಿ ಸಾಕಷ್ಟು ರಕ್ಷಣೆ ಇದೆ. ಆ ರಕ್ಷಣೆಗಳಲ್ಲಿ ಸ್ವಾತಂತ್ರ್ಯದ ಹಕ್ಕೂ ಇದೆ. ಆ ಪ್ರಕಾರ ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

”ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 58ರಡಿ ಯಾವ ವ್ಯಕ್ತಿಯ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿರುತ್ತದೆಯೋ ಅಂತಹ ವ್ಯಕ್ತಿಗೆ ಸಾಕಷ್ಟು ಅವಕಾಶ ನೀಡಬೇಕಾಗುತ್ತದೆ. ಆ ವ್ಯಕ್ತಿಗೆ ಏಕೆ ಅಂತಹ ಆದೇಶ ಹೊರಡಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು. ಆನಂತರ ಆ ವ್ಯಕ್ತಿಯ ಅಹವಾಲು ಆಲಿಸಬೇಕು. ಮತ್ತು ಆದೇಶ ಹೊರಡಿಸಿದ ನಂತರ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಲು 30 ದಿನ ಕಾಲಾವಕಾಶ ನೀಡಬೇಕು,” ಎಂದು ನ್ಯಾಯಾಲಯ ಆದೇಶಿಸಿದೆ.

”ಈ ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾದ ಉಪ ವಿಭಾಗಾಧಿಕಾರಿ ನಿಯಮಗಳನ್ನು ಮೀರಿ ಆದೇಶ ಹೊರಡಿಸಿದ್ದಾರೆ. ಅವರ ಆದೇಶ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಆತನ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಇವೆ ಎನ್ನುವ ಕಾರಣಕ್ಕೆ ಆದೇಶ ಹೊರಡಿಸುವುದು ಸರಿಯಲ್ಲ. ಆತ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿಲ್ಲ. ನೆಪ ಮಾತ್ರಕ್ಕೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ,” ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.ಅರ್ಜಿದಾರರನ್ನು ಉಪವಿಭಾಗಾಧಿಕಾರಿ 2024ರ ಮಾರ್ಚ್ 20ರಿಂದ ಅನ್ವಯವಾಗುವಂತೆ 2024ರ ಜೂನ್ 10ರವರೆಗೆ ಮೈಸೂರಿನಿಂದ ದಾವಣಗೆರೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಕೆಲವು ದಿನಗಳ ಹಿಂದಷ್ಟೇ, ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗ ದಳದ ಮುಖಂಡ ಭರತ್ ಕುಮಾರ್ ಅವರನ್ನು ಮೈಸೂರಿಗೆ ಗಡಿಪಾರು ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಮಂಗಳೂರು ಉಪ ವಿಭಾಗಾಧಿಕಾರಿ ಹೊರಡಿಸಿದ ಗಡಿಪಾರು ಆದೇಶವು ಊಹೆಗಳಿಂದ ಕೂಡಿದೆ. ಭರತ್ ಕುಮಾರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಹುದು ಎಂಬ ಶಂಕೆ ಹೊಂದುವುದು ಕಾನೂನುಬಾಹಿರ. ಅವರ ವಿರುದ್ಧದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರು ಖುಲಾಸೆಗೊಂಡಿವೆ ಎಂಬ ಅವರ ಪರ ವಕೀಲರ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿತ್ತು ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";